ಸಜ್ಜನ ರಾಜಕಾರಣಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ ನಿಧನ

ಹೊಸದಿಗಂತ ವರದಿ,ಶಿರಸಿ:

ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ ಟಿಎಸ್‌ಎಸ್‌ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವಯೋ ಸಹಜ ಖಾಯಿಲೆಯಿಂದ ಬುಧವಾರ ನಿಧನರಾದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶಾಂತಾರಾಮ ಹೆಗಡೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ, ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಇವರು ಶಿಕ್ಷಣ, ಸಹಕಾರ, ರಾಜಕಾರಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ಅಡಕೆ ಮಾರುಕಟ್ಟೆ ಖಾಸಗಿ ವರ್ತಕರ ಹಿಡಿತದಲ್ಲಿ ನಲುಗುತ್ತಿರುವ ಸಂದರ್ಭದಲ್ಲಿ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ವತಿಯಿಂದ ಸ್ವಂತ ಖರೀದಿ ಯೋಜನೆ ಆರಂಭಿಸುವಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಅಡಕೆ ಬೆಳೆಗಾರರ ಹಿತಕಾಯುವಲ್ಲಿ ಯಶಸ್ವಿಯಾಗಿದ್ದರು. ರೈತರ ಅಡಕೆಯನ್ನು ಯೋಗ್ಯದರದಲ್ಲಿ ಖರೀದಿಸಿ ಅಡಕೆಗೆ ಬೇಡಿಕೆ ತಗ್ಗದಂತೆ ನೋಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಹೊರ ಮಾರುಕಟ್ಟೆಯಲ್ಲಿ ಅಡಕೆಗೆ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಯೋಗ್ಯ ದರದಲ್ಲಿ ಅಡಕೆಯನ್ನು ಖರೀದಿಸಿ, ಶೇಖರಿಸಿ ಮೌಲ್ಯವರ್ಧಿತ ಉತ್ಪನ್ನವಾಗಿ ಸಂಸ್ಕರಿಸಿ ಬೇಡಿಕೆ ಹೆಚ್ಚಾಗುವಂತೆ ನೋಡಿಕೊಂಡು ರೂ.6,000 ಪ್ರತಿ ಕ್ವಿಂಟಲ್ ಇದ್ದ ಅಡಕೆ ದರವನ್ನು ಸರಾಸರಿ ರೂ.20,000ಕ್ಕೆ ಏರಿಸಿದ ಕೀರ್ತಿ ಶಾಂತಾರಾಮ ಹೆಗಡೆ ಅವರಿಗೆ ಸಲ್ಲುತ್ತದೆ. ಇದುವ ಎಚ್.ಕೆ.ಪಾಟೀಲ ಅವರು ಕೃಷಿ ಸಚಿವರಾಗಿದ್ದಾಗ ಅಡಕೆಗೆ ಸರಕಾರದಿಂದ ಪ್ರಪ್ರಥಮ ಬಾರಿಗೆ ಬೆಂಬಲ ಬೆಲೆ ದೊರಕಿಸುವಲ್ಲಿ ಯಶಸ್ವಿಯಾಗಿದ್ದರು.
ಅಡಕೆ ಖರೀದಿಯ ಮೂಲಕ ಬೆಳೆಗೆ ಯೋಗ್ಯ ದರ ದೊರಕಿಸುವ ಮುಖ್ಯ ಉದ್ದೇಶದ ಜೊತೆಯಲ್ಲಿ ಅಡಕೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು 2002ರಲ್ಲಿ ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳ ಸ್ಥಾಪಿಸಲು ಸಮಾನ ಮನಸ್ಕ ಸಹಕಾರಿಗಳೊಂದಿಗೆ ಶ್ರಮಿಸಿದ್ದಲ್ಲದೇ, ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ 3 ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿ ನಂತರ ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾ, ಶಿರಸಿ ಇದರ ಉಪಾಧ್ಯಕ್ಷರಾಗಿ, ನಂತರ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಶಾಂತಾರಾಮ ಹೆಗಡೆ, ಪದ್ಮಭೂಷಣ ಡಾ: ಡಿ.ವಿರೇಂದ್ರ ಹೆಗ್ಗಡೆ, ಧರ್ಮಸ್ಥಳರವರು ಸಂಸ್ಥಾಪಕ ಅಧ್ಯಕ್ಷರಾಗಿರುವ ಅರೇಕಾನಟ್ ರೀಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಫೌಂಡೇಶನ್, ಮಂಗಳೂರು” ಇದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶಿರಸಿಯಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ, ವಾಣಿಜ್ಯ ಸಂಕೀರ್ಣ ಮತ್ತು ಮಹಿಳಾ ವಸತಿ ನಿಲಯ ಇವುಗಳನ್ನು ಹೊಂದಿ ಸೇವಾ ತತ್ಪರವಾಗಿರುವ ಸಂಸ್ಥೆ “ತೋಟಗಾರ್ಸ್ ವೆಲ್‍ಫೇರ್ ಅಸೋಸಿಯೇಶನ್”, ಶಿರಸಿ ಇದರ ನಿರ್ದೇಶಕರಾಗಿ, ಗ್ರಾಮಿಣ ಭಾಗದ ಜನರ ಆರೋಗ್ಯ ಮತ್ತು ವೈದ್ಯಕೀಯ ಅವಶ್ಯಕತೆಗಳ ಪೂರೈಕೆ ಹಾಗೂ ಸೇವೆ ಮುಡಿಪಾಗಿರುವ ಎಸ್.ಆರ್.ಕೆ. ಫೌಂಡೇಶನ್, ಶಿರಸಿ ಇದರ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿರಸಿ ಸುತ್ತಮುತ್ತಲಿನ ಎಲ್ಲ ಜನರ ಆಧುನಿಕ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸುವ ಕಲ್ಪನೆಯೊಂದಿಗೆ ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿ ಲಕ್ಷಾಂತರ ಜನರಿಗೆ ವೈದ್ಯಕೀಯ ನೆರವು ನೀಡುತ್ತಿರುವ ಅತ್ಯಾಧುನಿಕ ಟಿ.ಎಸ್.ಎಸ್ ಶ್ರೀ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ವಿಶ್ವಸ್ಥ ಸಮಿತಿಯಾದ “ತೋಟಗಾರರ ಸೇವಾ ಸಮಿತಿ, ಶಿರಸಿ” ಇದರಲ್ಲಿ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಅಗಲಿದ ಇವರ ಪಾರ್ಥಿ ಶರೀರದ ದರ್ಶನಕ್ಕೆ ಸಾಮ್ರಾಟ್‌ ವಸತಿಗೃಹದಲ್ಲಿ ವ್ಯವಸ್ಥೆ ಮಾಡಲಾಗವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!