ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ವಿರುದ್ಧ ಜಾರಿ ನಿರ್ದೇಶನಾಲಯದ (ED)ಅಧಿಕಾರಿಗಳ ಮುಗಿಬಿದ್ದಿದ್ದು, ಇದೀಗ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಾಂಚಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಇಡಿ ತಂಡ ಸೋಮವಾರ ದೆಹಲಿಯಲ್ಲಿರುವ ಸೋರೆನ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು. ಆದರೆ ಈ ವೇಳೆ ಸೋರೆನ್ ಅವರು ಮನೆಯಲ್ಲಿ ಇರಲಿಲ್ಲ. ಇಡಿ ತಂಡವು ಸುಮಾರು 13 ಗಂಟೆಗಳ ಕಾಲ ಅವರ ನಿವಾಸದಲ್ಲಿ ಬೀಡುಬಿಟ್ಟಿತು. ಶೋಧ ನಡೆಸುವ ಸಮಯದಲ್ಲಿ 36 ಲಕ್ಷ ರೂ. ನಗದು ಮತ್ತು ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಸೋರೆನ್ ಅವರ ನಿವಾಸದಿಂದ ತನಿಖಾ ಸಂಸ್ಥೆ ಐಷಾರಾಮಿ ಎಸ್‌ಯುವಿಯನ್ನು ವಶಪಡಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಹೇಮಂತ್ ಸೋರೆನ್ ಅವರು ರಾಂಚಿಯ ಪೊಲೀಸ್ ಠಾಣೆಯಲ್ಲಿ ಕಪಿಲ್ ರಾಜ್ ಮತ್ತು ತನಿಖಾಧಿಕಾರಿ ದೇವ್ರತ್ ಝಾ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.