Friday, January 2, 2026

ನಾಗರಹೊಳೆ, ಬಂಡೀಪುರದಲ್ಲಿ ಹಂತ ಹಂತವಾಗಿ ಆರಂಭವಾಗಲಿದ್ಯಾ ಸಫಾರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಫಾರಿ ವಾಹನಗಳ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುತ್ತಿವೆಯೇ? ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯವೆಷ್ಟು? ಎಂಬ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆಯಲ್ಲಿ ಅಧ್ಯಕ್ಷರ ಅನುಮತಿಯ ಮೇರೆಗೆ ಈ ವಿಷಯ ಪ್ರಸ್ತಾಪಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಕಳೆದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಹುಲಿಗಳ ದಾಳಿಯಿಂದ ಮೂವರು ಮೃತಪಟ್ಟು ಒಬ್ಬರು ಶಾಶ್ವತ ವಿಶೇಷಚೇತನರಾದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿತ್ತು. ಈ 2 ತಿಂಗಳ ಅವಧಿಯಲ್ಲಿ ಕಾಡಿನ ಹೊರಗೆ ಹುಲಿ ದಾಳಿ ನಡೆದಿಲ್ಲ, ಯಾವುದೇ ಜೀವಹಾನಿ ಆಗಿಲ್ಲ ಎಂದು ಸಭೆಗೆ ವಿವರಿಸಿದರು.

1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿ ಇತ್ತು. ಇಂದು ಸುಮಾರು 175-200 ಹುಲಿಗಳಿವೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿಲೋ ಮೀಟರ್ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ 900 ಚದರ ಕಿಲೋ ಮೀಟರ್ ಕಾಡಿನಲ್ಲಿ 2 ಪಟ್ಟು ಹುಲಿಗಳಿವೆ ಇದು ಸಹ ಹುಲಿಗಳು ಕಾಡಿನಿಂದ ನಾಡಿನತ್ತ ಬರಲು ಕಾರಣವಾಗಿದೆ ಎಂದು ಈಶ್ವರ್‌ ಖಂಡ್ರೆ ತಿಳಿಸಿದರು.

ವನ ಮತ್ತು ವನ್ಯಜೀವಿ ವಿಭಾಗದ ರಾಯಭಾರಿ ಅನಿಲ್ ಕುಂಬ್ಳೆ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ ಸಫಾರಿಗೂ ಸಂಬಂಧವಿಲ್ಲ, ಸಫಾರಿಗೆ ಕೇವಲ ಶೇ.8ರಷ್ಟು ಅರಣ್ಯ ಪ್ರದೇಶವೂ ಬಳಕೆ ಆಗುವುದಿಲ್ಲ, ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

error: Content is protected !!