ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ಉಗ್ರರ ದಾಳಿ ಭೀತಿ ಹೆಚ್ಚುತ್ತಿದ್ದು, ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ನಂಟು ಹೊಂದಿದ 21 ಭಯೋತ್ಪಾದಕರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಾಕಿಸ್ತಾನ ಸೇನೆಯೂ ಬಲೂಚಿಸ್ತಾನ ಪ್ರಾಂತ್ಯದಲ್ಲಿ 21 ಉಗ್ರರನ್ನು ಹತ್ಯೆ ಮಾಡಿದೆ. ಮೃತಪಟ್ಟಿರುವ ಉಗ್ರರು ಈ ಹಿಂದೆ ಬಲೂಚಿಸ್ತಾನ ಪ್ರದೇಶದಲ್ಲಿ ಮೂರು ಸಂಘಟಿತ ದಾಳಿಗಳನ್ನು ನಡೆಸಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೇನೆಯ ಹಿರಿಯ ಅಧಿಕಾರಿ, ಮಾಚ್ ಮತ್ತು ಕೋಲ್ಪುರ ಪ್ರದೇಶದಲ್ಲಿ ಬಲೂಚ್ ಲಿಬರೇಶನ್ ಆರ್ಮಿ ಮುಜಾಹಿದ್ ಬ್ರಿಗೇಡ್ ಜೊತೆ ಸಂಪರ್ಕ ಹೊಂದಿದ್ದ ಉಗ್ರರು ಅಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, 21 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.