ಕಾಸರಗೋಡಿನಲ್ಲೊಂದು ‘ದೃಶ್ಯಂ’ ಮಾದರಿ ಘಟನೆ: ಐದು ವರ್ಷ ಬಳಿಕ ಶವಕ್ಕಾಗಿ ಮತ್ತೆ ಶೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ‘ದೃಶ್ಯಂ’ ಸಿನೆಮಾದ ಮಾದರಿಯಲ್ಲಿಯೇ ಕಾಸರಗೋಡು ಜಿಲ್ಲೆಯಲ್ಲೊಂದು ಘಟನೆ ನಡೆದಿದ್ದು, ಮತ್ತೆ ಕುತೂಹಲದ ಕೇಂದ್ರ ಬಿಂದುವಾಗಿದೆ. ಕಳೆದ ಐದು ವರ್ಷಗಳ ಹಿಂದೆ ಕೊಲೆಯಾಗಿರುವ ಮಹಿಳೆಯ ಮೃತದೇಹಕ್ಕಾಗಿ ಇದೀಗ ಪೊಲೀಸರು ಮತ್ತೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಕೊಲ್ಲಂ ಇರವಿಪುರಂ ವಾಳತ್ತಿಂಗಲ್ ವೇಳೆ ವೀಟಿಲ್‌ನ ನಿವಾಸಿ ಪ್ರಮೀಳಾ (30) ಎಂಬವರು ಪತಿ ಸೆಲ್ವರಾಜ್ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಸರಗೋಡು ವಿದ್ಯಾನಗರದ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದವರು 2019 ಸೆ. 19ರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದರು.

ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನಾಪತ್ತೆಗೂ ಮುನ್ನ ದಂಪತಿ ನಡುವೆ ಜಗಳ ನಡೆದಿರುವುದು ಗೊತ್ತಾಗಿತ್ತು. ಪತಿ ಸೆಲ್ವರಾಜ್‌ನ ಚಲನವಲನದ ಬಗ್ಗೆ ಸಂಶಯಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನು ಆಕೆಯನ್ನು ಕೊಲೆಗೈದು ಗೋಣಿಚೀಲದಲ್ಲಿ ತುಂಬಿ, ತೆಕ್ಕಿಲ್ ಹೊಳೆಗೆ ಎಸೆದಿರುವುದಾಗಿ ಹೇಳಿಕೆ ನೀಡಿದ್ದ. ಆದರೆ ಅಗ್ನಿಶಾಮಕ ದಳ, ಮುಳುಗು ತಂಡದೊಂದಿಗೆ ಅಂದು ಹುಡುಕಾಟ ನಡೆಸಿದ್ದರೂ, ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ನಂತರ ಪ್ರಕರಣ ಕ್ರೈಂ ಬ್ರಾಂಚ್‌ಗೆ ಹಸ್ತಾಂತರವಾಗಿದ್ದು, ನೂತನ ಡಿವೈಎಸ್‌ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈಗ ಕಾರ್ಯಾಚರಣೆಗೆ ಮರುಜೀವ ನೀಡಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಸೆಲ್ವರಾಜ್ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಡುವಡ್ಕ ಎಂಬಲ್ಲಿನ ನಿರ್ಜನ ಪ್ರದೇಶದ ಹಿತ್ತಿಲೊಂದಕ್ಕೆ ಆಗಮಿಸಿ ಹುಡುಕಾಟದಲ್ಲಿ ನಿರತನಾಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈಗ ಮತ್ತೆ ಅಲರ್ಟ್ ಆಗಿದ್ದಾರೆ.
ಈ ಸ್ಥಳಕ್ಕೆ ಶ್ವಾನ ದಳದೊಂದಿಗೆ ಆಗಮಿಸಿರುವ ಪೊಲೀಸರು, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!