ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಸರಿ ಶಾಲು (Saffron Stoles) ಧರಿಸಬಾರದಿತ್ತು, ನಾನು ಯಾವುದೇ ಕಾರಣಕ್ಕೂ ಕೇಸರಿ ಶಾಲು ಧರಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (HD Kumaraswamy) ಅವರು ಕೇಸರಿ ಶಾಲು ಧರಿಸಿದ್ದು ಹೆಚ್ಚು ಚರ್ಚೆಯಾಗುತ್ತಿದೆ. ಆದ್ರೆ ಅಕಸ್ಮಾತ್ ಆಗಿ ನಡೆದಿರುವ ಘಟನೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ, ಜೊತೆಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.
ಮಂಡ್ಯದ ಕೆರಗೋಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಯಾರೋ ಬಂದು ಕೇಸರಿ ಶಾಲು ಹಾಕಿರುತ್ತಾರೆ, ಆಯಾ ಸಂದರ್ಭಕ್ಕೆ ಹಾಕಿರ್ತಾರೆ, ಅದಕ್ಕೇನು ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯ ಇಲ್ಲ, ಕೇಸರಿ ಶಾಲು ಹಾಕಬಾರದಿತ್ತು. ನಮ್ಮ ಪಕ್ಷದ ಶಾಲು ಹಾಕಬಹುದಿತ್ತು, ನಾಳೆ ನಾನು ಮೋದಿ (Narendra Modi) ಅವರ ಜೊತೆಗೆ ಹೋದಾಗಲೂ ನನ್ನ ಪಕ್ಷದ ಶಾಲನ್ನೇ ಹಾಕುತ್ತೇನೆ. ನಾನು ಖಂಡಿತಾವಾಗಿ ಕೇಸರಿ ಶಾಲು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ಅವರ ʻಪ್ರತ್ಯೇಕ ರಾಷ್ಟ್ರʼದ ಹೇಳಿಕೆ ಸಂಬಂಧ ಮಾತನಾಡಿ, ಡಿ.ಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ, ಯಾವ ಉದ್ದೇಶದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಈ ವಿಷಯದಲ್ಲಿ ಮಾತನಾಡುವುದಕ್ಕೆ ನನಗೆ ಇಷ್ಟವಿಲ್ಲ ಅವರು ವ್ಯಕ್ತಿಗತವಾಗಿ ಹೇಳಿರಬಹುದು, ಅದು ಪಕ್ಷದ ನಿರ್ಣಯ ಅಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ, ಸರ್ಕಾರ ನಡೆಸಿದೆ ಎಂದು ನುಡಿದಿದ್ದಾರೆ.