ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲ್ಗಳ್ಳತನ ಮತ್ತು ಕಳ್ಳಸಾಗಣೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ . ಇದು ‘ನವ ಭಾರತ’ದ ಭರವಸೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಶಾಖಪಟ್ಟಣಂನ ನೌಕಾ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮೊದಲ ಸರ್ವೇ ವೆಸೆಲ್ ಲಾರ್ಜ್ (ಎಸ್‌ವಿಎಲ್) ಹಡಗು ಐಎನ್‌ಎಸ್ ಸಂಧಾಯಕ್ ಅನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಿದ ಬಳಿಕ ಮಾತನಾಡಿದ ಅವರು, ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಗೆ ಆದ್ಯತೆ ನೀಡಲಾಗಿದೆ. ಭದ್ರತೆ ಖಾತ್ರಿಪಡಿಸುವ ವಿಷಯದಲ್ಲಿ ಹಿಂದಡಿ ಇಡುವ ಮಾತೇ ಇಲ್ಲ. ನೌಕಾಪಡೆಯ ಮೊದಲ ಪ್ರತಿಸ್ಪಂದಕ ಇದಾಗಿದ್ದು, ನೌಕಾಪಡೆಯ ಶಕ್ತಿ ಮತ್ತು ದೃಢತೆ ಇದಾಗಿದೆ ಎಂದು ಅವರು ಹೇಳಿದರು.
‘ಜಾಗತಿಕ ವ್ಯಾಪಾರಕ್ಕೆ ಬಂದಾಗ, ಹಿಂದೂ ಮಹಾಸಾಗರದ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಅಡೆನ್ ಗಲ್ಫ್ ಮತ್ತು ಗಿನಿಯಾ ಕೊಲ್ಲಿಗಳಂತಹ ಅನೇಕ ಚಾಕ್ ಪಾಯಿಂಟ್‌ಗಳು ಹಿಂದೂ ಮಹಾಸಾಗರದಲ್ಲಿವೆ. ದೊಡ್ಡ ಪ್ರಮಾಣದ ಅಂತಾರಾಷ್ಟ್ರೀಯ ವ್ಯಾಪಾರವು ಇಲ್ಲಿ ನಡೆಯುತ್ತದೆ. ಈ ಪ್ರದೇಶಗಳು ಈ ಚೋಕ್ ಪಾಯಿಂಟ್‌ಗಳು ಬಹು ಬೆದರಿಕೆಗಳನ್ನು ಎದುರಿಸುತ್ತಿವೆ, ಅದರಲ್ಲಿ ದೊಡ್ಡದು ಕಡಲ್ಗಳ್ಳರಿಂದ ಆಗಿದೆ ಎಂದು ಹೇಳಿದರು.
‘ನಾವು ಏನೇ ಆದರೂ, ಎಷ್ಟೇ ವೆಚ್ಚವಾದರೂ, ನ್ಯಾವಿಗೇಷನ್, ವ್ಯಾಪಾರ ಮತ್ತು ವಾಣಿಜ್ಯದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ಬಯಸುತ್ತೇವೆ. ವಿವಿಧ ದೇಶಗಳನ್ನು ಒಳಗೊಂಡ ಅಡೆತಡೆಯಿಲ್ಲದ ವ್ಯಾಪಾರ ಇರಬೇಕು. ನಮ್ಮ ಬೆಳೆಯುತ್ತಿರುವ ನೌಕಾ ಶಕ್ತಿ ಮತ್ತು ಸಮುದ್ರದ ಪ್ರಭಾವವು ಈ ಪ್ರದೇಶದಲ್ಲಿ ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆಯನ್ನು ನಿಲ್ಲಿಸುವ ಕಡೆಗೆ ನಿರ್ದೇಶಿಸುತ್ತಿದೆ’ ಎಂದು ಸಿಂಗ್ ಹೇಳಿದರು.