ಹೊಸದಿಗಂತ ವರದಿ, ಚಿತ್ರದುರ್ಗ:
ಎಂ.ಜೆ.ತಿಪ್ಪೇಸ್ವಾಮಿ
ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ಫಲ-ಪುಷ್ಪ ಪ್ರದರ್ಶನ ಜನರನ್ನು ಸೂಜಿಗಲಿನಂತೆ ಸೆಳೆಯುತ್ತಿದೆ. ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಳೆದ ೩೧ ವರ್ಷಗಳಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಾ ಬರಲಾಗುತ್ತಿದೆ. ವಿವಿಧ ರೀತಿಯ ಹಣ್ಣು, ತರಕಾರಿ, ಹೂವುಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ವಿವಿಧ ಬಗೆಯ ಹೂವು, ಹಣ್ಣುಗಳನ್ನು ಬಳಸಿ ಬಗೆ ಬಗೆಯ ಆಕೃತಿಗಳು, ಸಾಹಿತಿಗಳು, ಕವಿಗಳು, ದಾರ್ಶನಿಕರ ಆಕೃತಿಗಳನ್ನು ಆಕರ್ಷಕವಾಗಿ ನಿರ್ಮಿಸಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಫಲ-ಪುಷ್ಪ ಪ್ರದರ್ಶನದಲ್ಲಿ ವಿಶೇಷ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಕುಂಡದಲ್ಲಿ ಬೆಳೆಸಿ ಪ್ರದರ್ಶಿಸಲಾಗಿದೆ. ವಿವಿಧs ಪ್ರಬೇಧಗಳ ಹೂ ಜೋಡಣೆ, ಕುಂಡಗಳಲ್ಲಿ ಬೆಳೆಸಿದ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಇಕೆಬಾನ, ಕುಬ್ಜ ಮರ-ಗಿಡಗಳು, ತರಕಾರಿ ಕೆತ್ತನೆ ಮತ್ತು ಅಲಂಕಾರಿಕಾ ಗಿಡಗಳ ತೋಟಗಳ ಸ್ಪರ್ಧೆಗಳು ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ತರಕಾರಿ ಹಾಗೂ ಇತರೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆಗಳು ಅಡಕವಾಗಿವೆ. ಭಾರತ ಸಂವಿಧಾನದ ಬಗ್ಗೆ ಕಲಾಕೃತಿ, ಚಂದ್ರಯಾನ-೩, ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಮಳೆ ನೀರು ಕೊಯ್ಲು ಘಟಕಗಳು ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿವೆ.
ಭಾರತದ ಸಂವಿಧಾನದ ಬಗ್ಗೆ ಕಲಾ ಕೃತಿ : ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಸಂವಿಧಾನದ ಅಂತಿಮ ಪ್ರತಿಯನ್ನು ಸಾಂವಿಧಾನಿಕ ಸಭೆಯ ಅಧ್ಯಕ್ಷರಾದಂತಹ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ದಿನಾಂಕ: ೨೫.೧೧.೧೯೪೯ ರಂದು ಸಲ್ಲಿಸಿದ್ದು, ಆ ಕ್ಷಣದ ಕಲಾಕೃತಿಯನ್ನು ರಚಿಸಿ ವಿವಿಧ ಹೂಗಳಿಂದ ಅಲಂಕರಿಸಲಾಗಿದೆ. ಇದು ನಮ್ಮ ಸಂವಿಧಾನದ ಶ್ರೇಷ್ಟತೆಯನ್ನು ಸಾರುವಂತಿದೆ.
ಚಂದ್ರಯಾನ-೩ : ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅವರು ಚಂದ್ರಯಾನ-೩ ಯಶ್ವಸಿಯಾಗಿ ೨೩.೦೮.೨೦೨೩ ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದು, ಪ್ರಪಂಚದ ಮೊದಲನೇ ದೇಶವಾಗಿರುತ್ತದೆ. ದೇಶದ ಹೆಮ್ಮೆಯ ವಿಷಯವಾಗಿದ್ದು, ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಪ್ರತಿಕೃತಿಗಳ ಪ್ರದರ್ಶಿಸಿರುವುದು ನಮ್ಮ ದೇಶದ ಹೆಮ್ಮೆಯ ಗರಿಮೆಯ ಸಂಕೇತವಾಗಿದೆ.
ಐತಿಹಾಸಿಕ ಕೋಟೆಯ ಮಳೆ ನೀರು ಕೊಯ್ಲು ಘಟಕಗಳು : ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿ ಅಂದಿನ ಕಾಲದಲ್ಲಿ ಅತ್ಯುತ್ತಮ ಮಳೆ ನೀರು ಕೊಯ್ಲು ಮಾಡಿ ಅಂದಿನ ಜನ, ಜಾನುವಾರುಗಳಿಗೆ ಹಾಗೂ ಕೃಷಿಗೆ ನೀರನ್ನು ಬಳಸುತ್ತಿದ್ದು, ಪ್ರಸ್ತುತ ಮಳೆ ನೀರು ಕೊಯ್ಲು ಮಾಡುವುದು ಜಿಲ್ಲೆಯ ಕೃಷಿಗೆ ಅವಶ್ಯಕವಾಗಿರುತ್ತದೆ. ಆದುದರಿಂದ, ಸದರಿ ಗೋಪಾಲಸ್ವಾಮಿ ಹೊಂಡ, ಅಕ್ಕತಂಗಿ ಹೊಂಡ, ಸಿಹಿನೀರು ಹೊಂಡ ಹಾಗೂ ಸಂತೆಹೊಂಡಗಳು ಒಂದಕ್ಕೊಂದು ಸಂಪರ್ಕಿಸಿರುವ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಇದು ಇಂದಿನ ಪ್ರಸ್ತುತ ಸಂದರ್ಭಕ್ಕೆ ನೀರಿನ ಮಹತ್ವವನ್ನು ತಿಳಿಸುವಂತಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ ಕಲಾಕೃತಿ : ಜಲವೇ ಜೀವನ ಎಂಬುದನ್ನು ಅರಿತು ನಮ್ಮ ನಾಡಿನ ಬೆನ್ನೆಲುಬಾದ ಕೃಷಿಗೆ ಖುಷಿಯಿಂದ ನೀರುಣಿಸಬೇಕೆಂಬ ಕನಸಿನೊಂದಿಗೆ ಬರದ ನಾಡಾದ ಚಿತ್ರದುರ್ಗ ಜಿಲ್ಲೆಯಲ್ಲಿ ೧೯೦೭ರಲ್ಲಿ ‘ವಾಣಿ ವಿಲಾಸ ಸಾಗರ’ (ಮಾರಿ ಕಣಿವೆ) ಅಣೆಕಟ್ಟು ಕಟ್ಟಿ ಇಂದಿಗೂ ಜನರ ನೀರಿನ ದಾಹ ತಣಿಸುತ್ತಿರುವ ಶ್ರೀಚೇತನ. ಚಿತ್ರದುರ್ಗ – ಚಿಕ್ಕಜಾಜೂರು ರೈಲ್ವೆ ಮಾರ್ಗ ಮತ್ತು ಚಿತ್ರದುರ್ಗದಿಂದ ಬೆಂಗಳೂರಿಗೆ ೨೨೦ ಮೈಲಿ ರಸ್ತೆ ನಿರ್ಮಿಸಿ ಸಾರಿಗೆ ಸಂಪರ್ಕ ಸ್ಥಿರಗೊಳಿಸಿದ ಮಹಾಚೇತನ. ಈ ಎಲ್ಲಾ ಕೊಡುಗೆಗಳಿಂದ ಚಿತ್ರದುರ್ಗದ ಜನತೆ ಒಡೆಯರನ್ನು ಸದಾಕಾಲ ಸ್ಮರಿಸುತ್ತಾ ಇಲ್ಲಿನ ಜನ ನಿಮಗೆ ಚಿರಋಣಿಯಾಗಿದ್ದೇವೆ ಎಂಬ ಆಶಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೃತಿ ಪ್ರದರ್ಶಿಸಲಾಗಿದೆ.
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ : ಎಲ್ಲಾ ಧರ್ಮಗಳ ಎಲ್ಲ ವರ್ಗಗಳ ಎಲ್ಲೆ ಮೀರಿ ತನ್ನ ತಪೋಬಲದಿಂದ ಪಡೆದುಕೊಂಡ ಆದರ್ಶತತ್ವಗಳನ್ನು ಇಡೀ ವಿಶ್ವಕ್ಕೆ ಕರುಣಿಸಿ, ಮನುಕುಲದ ಮಹೋನ್ನತಿಗಾಗಿ ಅವಿರತ ಶ್ರಮಿಸಿದವರು ಬಸವಣ್ಣ. ’ಕಾಯಕವೇ ಕೈಲಾಸ’ ಎಂಬ ಮಾತಿನಿಂದ ೧೨ನೇ ಶತಮಾನದಲ್ಲೇ ಕಾಯಕದ ಮಹತ್ವ ಸಾರಿದ, ಮೇಲು-ಕೀಳೆಂಬ ಕೀಳು ಮನೋಭಾವ ದೂರ ಮಾಡಿ ಸಮಾನತೆಯ ಸಂದೇಶ ಸಾರಿದ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಈ ಬಾರಿಯ ಪ್ರದರ್ಶನದ ಮತ್ತೊಂದು ಆಕ್ಷರ್ಷಣೆ. ಇಂದಿನ ಅಸಮಾನತೆಯ ಸಮಾಜ ಸೇರಿದಂತೆ ಸರ್ವ ಕಾಲಕ್ಕೂ ಬಸವಣ್ಣವರ ಸಂದೇಶ ಪ್ರಸ್ತುತೆಯನ್ನು ಈ ಪ್ರತಿಮೆ ಸಾರುತ್ತಿದೆ.
ಮಿಶ್ರ ತೋಟಗಾರಿಕೆ ಕೃಷಿ ಮಾದರಿ : ಇತ್ತೀಚಿಗೆ ರೈತರು ಏಕ ಬೆಳೆಪದ್ದತಿ ಅನುಸರಿಸುತ್ತಿದ್ದು, ರೈತರ ಆದಾಯಕ್ಕೆ ತೊಂದರೆ ಆಗಲಿದೆ. ವೈಜ್ಞಾನಿಕವಾಗಿ ನೀರು ಬಳಕೆಯೊಂದಿಗೆ ಮಿಶ್ರ ಕೃಷಿ ಪದ್ದತಿ ಅಳವಡಿಸಿಕೊಂಡಲ್ಲಿ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದೆಂಬ ಮಾದರಿ ಪ್ರದರ್ಶಿಸಲಾಗಿದೆ. ಇದರ ಜೊತೆಗೆ ಶ್ರೀ ಶಿವಕುಮಾರ ಸ್ವಾಮಿಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶ್ರೀ ಪುಟ್ಟರಾಜ ಗವಾಯಿಗಳ ಕಲಾಕೃತಿಗಳು.
ಕನ್ನಡಕ್ಕೆ ೦೯ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಹಾನೀಯರ ಕಲಾಕೃತಿಗಳನ್ನು ಹಣ್ಣು ಮತ್ತು ತರಕಾರಿ ಕೆತ್ತನೆಯಲ್ಲಿ ರಚಿಸಲಾಗಿದೆ. ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ವಿವಿಧ ಪುಷ್ಪ ಸಸಿಗಳು, ತಳಿಗಳು ಫಲ-ಪುಷ್ಪ ಪ್ರದರ್ಶನದಲ್ಲಿ ಗಮನಸೆಳೆಯುತ್ತಿವೆ.