ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಚಿರಂಜೀವಿ ಹಾಗೂ ಲೇಡಿ ಸೂಪರ್‌ಸ್ಟಾರ್ ನಯನತಾರಾ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಅಧಿಕೃತವಾಗಿ ಪ್ರಕಟಿಸಿದ್ದು, ಈ ಘೋಷಣೆಯೊಂದಿಗೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಶೈನ್ ಸ್ಕ್ರೀನ್ಸ್ ಸಂಸ್ಥೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರದ ಟ್ರೇಲರ್ ಜನವರಿ 4ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಟ್ರೇಲರ್‌ಗೆ ಮುನ್ನ ಬಿಡುಗಡೆಗೊಂಡ ಪ್ರೊಮೋ ವೀಡಿಯೋ ಕೂಡ ಚಿತ್ರ ಕುರಿತ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇತ್ತೀಚೆಗೆ ಚಿರಂಜೀವಿ ಮತ್ತು ವೆಂಕಟೇಶ್ ದಗ್ಗುಬಾಟಿ ಅಭಿನಯದ ಹೈ ಎನರ್ಜಿ ಮಾಸ್ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಹಾಡನ್ನು ಚಿರಂಜೀವಿ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ವೆಂಕಟೇಶ್ ಜೊತೆಗಿನ ನೃತ್ಯ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ಇಬ್ಬರೂ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಆರಂಭದಲ್ಲಿ #Mega157 ಎಂಬ ವರ್ಕಿಂಗ್ ಟೈಟಲ್ ಹೊಂದಿದ್ದ ಈ ಚಿತ್ರವನ್ನು ಶೈನ್ ಸ್ಕ್ರೀನ್ಸ್ ಮತ್ತು ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಹಾಗೂ ಸುಷ್ಮಿತಾ ಕೊನಿಡೇಲಾ ನಿರ್ಮಿಸಿದ್ದಾರೆ. ಈ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಜನವರಿ 12, 2026ರಂದು ಸಂಕ್ರಾಂತಿ ಹಬ್ಬದ ಅಂಗವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ.

