ಹೊಸದಿಗಂತ, ಮಂಗಳೂರು:
ಭಾರೀ ಕುತೂಹಲ ಸೃಷ್ಟಿಸಿದ್ದ ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ಆರೋಪಿಯನ್ನು ಬಲೆಗೆ ಕೆಡಹುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಧರ್ಮೇಂದ್ರ ಕುಮಾರ್ ಸುಹಾನಿ ಎಂಬಾತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಲಿದ್ದಾರೆ. ಈತ ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ಜುಲೈ ತಿಂಗಳಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮ್ರಗೋಡು ಮಿಲನ ರೆಸಿಡೆನ್ಸಿಯಲ್ಲಿ ವಿಶಾಲಾ ಗಾಣಿಗ ಕೊಲೆ ನಡೆದಿತ್ತು. ಸಾಕಷ್ಟು ಸುದ್ದಿ ಮಾಡಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ರಾಮಕೃಷ್ಣ, ಸ್ವಾಮಿನಾಥನ್ ನಿಶಾದ್ ಮತ್ತು ರೋಹಿತ್ ರಾಣಾ ಪ್ರತಾಪ್‌ನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಧರ್ಮೇಂದ್ರನನ್ನು ಕೂಡಾ ಬಂಧಿಸಲಾಗಿದ್ದು, ಸುಪಾರಿ ಹಂತಕ ಗುತ್ತಿಗೆ ಹಂತಕ ಸ್ವಾಮಿನಾಥನ್ ನಿಶಾದ್ ಎಂಬಾತನಿಗೆ ವಿಶಾಲ ಗಾಣಿಗನ ಪತಿ ರಾಮಕೃಷ್ಣನನ್ನು ಪರಿಚಯಿಸಿ, ವಿಶಾಲ ಗಾಣಿಗ ಕೊಲೆಗೆ ಸಹಕರಿಸಿದ ಆರೋಪ ಈತನ ಮೇಲಿದೆ.