ಹೊಸದಿಗಂತ, ಬೆಂಗಳೂರು:
ಫೆ. 10 ಮತ್ತು 11 ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದು, ಮೈಸೂರಿನ ಸುತ್ತೂರು ಜಾತ್ರೆ ಮತ್ತು ದಾವಣಗೆರೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.
ರಾಜ್ಯದಲ್ಲಿ ಜನರಷ್ಟೇ ಅಲ್ಲ ಜಾನುವಾರುಗಳೂ ಸರ್ಕಾರಕ್ಕೆ ಶಾಪ ಹಾಕುತ್ತಿವೆ. ಈ ಸರ್ಕಾರ ಜಾನುವಾರುಗಳ ಕೋಪಕ್ಕೂ ಗುರಿಯಾಗಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡುತ್ತಿದ್ದರು. ಅದರ ಪರಿಣಾಮ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ರೈತರಿಂದ ನಿತ್ಯ 85 ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ 716 ಕೋಟಿ ರೂ. ಬಾಕಿ ಹಣ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ರೈತರ ಹಣ ಬಾಕಿ ಉಳಿಸಿಕೊಂಡ ಪಾಪದ ಸರ್ಕಾರ ಎಂದು ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದ್ದರೆ, ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ, ಬಾಕಿ ಉಳಿಸಿಕೊಂಡ ಹಣ ತಕ್ಷಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಪ್ರತಿಯೊಂದರಲ್ಲೂ ರಾಜ್ಯ ಸರ್ಕಾರ ತನ್ನ ಹೊಣೆ ಮರೆತು, ಕೇಂದ್ರದ ಕಡೆ ಬೆಟ್ಟು ಮಾಡುತ್ತಿದೆ. ನಾನು ಮುಖ್ಯಮಂತ್ರಿಯವರನ್ನು ಪ್ರಶ್ನಿಸುತ್ತೇನೆ, ರಾಜಸ್ವ ಸ್ವೀಕೃತಿ ರೆವಿನ್ಯೂ ಟಾರ್ಗೆಟ್ 2.38 ಲಕ್ಷ ಕೋಟಿ ರೂ. ಗುರಿ ಇತ್ತು. ಡಿಸೆಂಬರ್ ಅಂತ್ಯಕ್ಕೆ 1.68 ಲಕ್ಷ ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಅಂದರೆ, ಶೇ.60 ರಷ್ಟು ಮಾತ್ರ ಗುರಿ ತಲುಪಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಶೆ.80 ಗುರಿ ತಲುಪಿತ್ತು. ರಾಜಸ್ವ ಗುರಿ ತಲುಪಲು ಯಾಕೆ ಸಾಧ್ಯವಿಲ್ಲ ಎಂದು ಕೇಳಿದರು.