Tuesday, January 6, 2026

ಜೋಳದ ಚಿಗುರು ಸೇವಿಸಿ ಒಂದೇ ಕ್ಷಣಕ್ಕೆ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಕುರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೋಬನಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ಸಿಪ್ಪೆ ಸೇವಿಸಿದ ಪರಿಣಾಮ ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.

ಗ್ರಾಮದ ಜಂಪಕ್ಕ ಎಂಬುವರಿಗೆ ಸೇರಿದ ಸುಮಾರು 200ಕ್ಕೂ ಅಧಿಕ ಕುರಿಗಳ ಹಿಂಡಿನಲ್ಲಿ 50ಕ್ಕೂ ಹೆಚ್ಚು ಕುರಿ ಮರಿಗಳು ಮೃತಪಟ್ಟಿವೆ. ಪ್ರತಿದಿನದಂತೆ ಮೊನ್ನೆ ಕುರಿಗಳನ್ನು ಮೇವಿಗಾಗಿ ಹೊಲದತ್ತ ಕರೆದೊಯ್ಯಲಾಗಿತ್ತು.

ಎಂದಿನಂತೆ ಹುಲ್ಲು ಮೇಯುತ್ತಿದ್ದ ಕುರಿಗಳು, ಏಕಾಏಕಿ ಕುಸಿದು ಬೀಳತೊಡಗಿದ್ದು, ಕೆಲವೇ ಕ್ಷಣಗಳಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದರಿಂದ ಕುರಿಗಾಹಿಗೆ ಭಾರೀ ಆಘಾತವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯ ವೇಳೆ ಕುರಿಗಳು ಜೋಳದ ಚಿಗುರು ಸಿಪ್ಪೆಯನ್ನು ಸೇವಿಸಿರುವುದು ಪತ್ತೆಯಾಗಿದೆ. ವೈದ್ಯಾಧಿಕಾರಿ ಅರ್ಕೆರಪ್ಪ ಅವರು, ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೆಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ ಕುರಿಗಳ ಮಾದರಿ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದ್ದು, ಅಂತಿಮ ವರದಿ ನಿರೀಕ್ಷಿಸಲಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಹಾಗೂ ಕುರಿಗಾಹಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

error: Content is protected !!