ಹೊಸದಿಗಂತ ವರದಿ: ಮೈಸೂರು:
ಜಿಲ್ಲೆಯ ನಂಜನಗೂಡು ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರವಾದ ಸುತ್ತೂರುನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ವೈವಿಧ್ಯಮಯ ವಿಜೃಂಭಣೆಯ ಅದ್ಧೂರಿ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು, ಎರಡನೇ ದಿನವಾದ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೧೧೮ ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ವಿವಿಧ ಮಠಾಧಿಪಿತಿಗಳ ಸಾನ್ನಿಧ್ಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೧೧೮ ಜೋಡಿಗಳ ಪೈಕಿ ೪ ವೀರಶೈವ ಲಿಂಗಾಯತ, ೬೧ ಎಸ್ ಸಿ, ೨೬ ಎಸ್ ಟಿ, ೧೮ ಹಿಂದುಳಿದ ವರ್ಗ, ೧೧ ಅಂತರಜಾತಿ ಜೋಡಿಗಳು ಮದುವೆಯಾಗುವ ಮೂಲಕ ಹೊಸಬಾಳಿಗೆ ಕಾಲಿಟ್ಟವು.
ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ೨೩ ಜೋಡಿಗಳು, ೪ ವಿಶೇಷ ಚೇತನ ಜೋಡಿಗಳು ಹಾಗು ಒಂದು ಜೋಡಿ ಮರು ಮದುವೆಯಾಗುವ ಮೂಲಕ ವಿಶೇಷ ಗಮನವನ್ನ ಸೆಳೆದವು.
ನವಜೋಡಿ ಸಂಭ್ರಮ ವಿವಾಹ ಸಂದರ್ಭದಲ್ಲಿ ವರನಿಗೆ ಪಂಚೆ, ಶರ್ಟು, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಯಿತು. ಎಲ್ಲ ವಧು-ವರರು ಹೊಸ ಸೀರೆ, ರವಿಕೆ, ಹೊಸ ವಸ್ತ್ರಗಳನ್ನು ತೊಟ್ಟು, ಬಾಸಿಂಗ ಕಟ್ಟಿಕೊಂಡು ಸುಂದರವಾಗಿ ಅಲಂಕರಿಸಿ ಕೊಂಡು ಕುಳಿತಿದ್ದರು. ಶುಭ ಮುಹೂರ್ತ ಆರಂಭವಾಗುತ್ತಿದ್ದoತೆ ಪೂಜ್ಯರು ಮತ್ತು ಅತಿ ಗಣ್ಯರು ಮಾಂಗಲ್ಯ ವಿತರಿಸಿದರು. ಬಳಿಕ ಮಂಗಳವಾದ್ಯ ಮೊಳಗುತ್ತಿದ್ದಂತೆ ವರನಿಂದ ವಧುವಿಗೆ ತಾಳಿ ಕಟ್ಟಿಸಿದರು. ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸುತ್ತಿದ್ದoತೆ ನೆರೆದ ಜನರು ಹೊಸ ಬಾಳಿನ ಹೊಸ್ತಿಲಿನಲ್ಲಿ ನಿಂತಿರುವ ಹೊಸ ಜೋಡಿ ಶುಭವಾಗಲಿ ಎಂದು ಶುಭ ಹಾರೈಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳೊಂದಿಗೆ, ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನoದಪುರಿ ಸ್ವಾಮೀಜಿ, ತಿರುವನಂತಪುರ ಶಾಂತಗಿರಿ ಆಶ್ರಮದ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿಯವರು ಹೊಸ ದಂಪತಿಗಳಿಗೆ ಆಶೀರ್ವಾದ ನೀಡಿದರು.
ಬಳಿಕ ಹೊಸ ಬಾಳಿಗೆ ಅಡಿಯಿಟ್ಟ ದಂಪತಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಯಿತು. ಎಲ್ಲಾ ಜೋಡಿಗಳನ್ನು ವೇದಿಕೆಯಲ್ಲಿ ಸಾಲಾಗಿ ಕೂರಿಸಿ, ಗ್ರೂಪ್ ಪೋಟೋ ತೆಗೆಯಲಾಯಿತು. ಬಳಿಕ ದಂಪತಿಗಳ ಮೆರವಣಿಗೆಯನ್ನು ನಡೆಸಲಾಯಿತು. ವಧು, ವರರ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು, ಸಂಬoಧಿಕರು ಹಾಜರಿದ್ದು ದಂಪತಿಗಳಿಗೆ ಶುಭ ಕೋರಿದರು.
ಬಂದಿದ್ದವರೆಗೆಲ್ಲಾ ಹಬ್ಬದೂಟವನ್ನು ಉಣಬಡಿಸಲಾಯಿತು.
ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರ ದಲ್ಲಿ ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿ ದಿನದಂದು ಆರು ದಿನಗಳ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಪ್ರಾರಂಭವಾಗುತ್ತದೆ. ಮರು ದಿನ ತ್ರಯೋದಶಿಯಂದು ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುವುದು ವಾಡಿಕೆಯಾಗಿದೆ.
೨೦೦೦ ರಿಂದ ೨೦೨೩ರವರಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ ೩೦೭೬ ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ನಡೆಯುವ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ ೨೦೦೯ ರಿಂದ ೪೫೭ ಜೋಡಿಗಳು ಸತಿಪತಿಗಳಾಗಿದ್ದಾರೆ. ಒಟ್ಟಾರೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು ೩೫೩೩ ಜೋಡಿಗಳು ವಿವಾಹ ಬಂಧನಕೊಳಗಾಗಿದ್ದಾರೆ.