ಹೊಸದಿಗಂತ ವರದಿ ಶಿವಮೊಗ್ಗ:
ಪಂಚಮಸಾಲಿ ಲಿಂಗಾಯಿತ ಸಮಾಜಕ್ಕೆ ೨ಎ ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಫೆ.೧೪ರಂದು ನಗರದ ಗೋಪಿ ವೃತ್ತದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದೆಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ನಿರಂತರ ಹೋರಾಟದ ಫಲವಾಗಿ ಮಾಜಿ ಸಿಎಂ ಬೊಮ್ಮಾಯಿ ಸರ್ಕಾರ ೨ಡಿ ಪ್ರತ್ಯೇಕ ಮೀಸಲಾತಿ ಘೋಷಿಸಿತ್ತು. ಆದರೆ ಚುನಾವಣೆ ಸಂದರ್ಭ ಘೋಷಣೆಯಾಗಿದ್ದರಿಂದ, ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಯಿತು. ನಾವು ಕೂಡ ಆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದೆವು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಬೆಳಗಾವಿ ಅಧಿವೇಶನದಲ್ಲೂ ಕೂಡ ನಮ್ಮ ಸಮುದಾಯದ ಶಾಸಕರು, ಈ ಬಗ್ಗೆ ಒತ್ತಡ ತಂದಿದ್ದರು ಎಂದರು.
ಮುಖ್ಯಮಂತ್ರಿಗಳು ಕೂಡ ಕಾನೂನು ತಜ್ಞರ ಸಭೆ ಕರೆಯುವುದಾಗಿ ತಿಳಿಸಿದ್ದರು. ಈಗ ತಿಂಗಳಾಗುತ್ತಾ ಬಂದಿದ್ದರೂ ಕೂಡ ಈ ಬಗ್ಗೆ ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಾಗಿಲ್ಲ. ಇದರಿಂದಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.