ಭಾರತ -ಮ್ಯಾನ್ಮಾರ್ ನಡುವಿನ ‘ಮುಕ್ತ ಸಂಚಾರ’ ರದ್ದು: ಕೇಂದ್ರ ಸರಕಾರದಿಂದ ದಿಟ್ಟ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾನ್ಮಾರ್ ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಎಚ್ಚೆತ್ತ ಕೇಂದ್ರ ಸರಕಾರ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಮುಂದಾಗಿದೆ. ಈ ಆದೇಶದಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಉಭಯ ದೇಶಗಳ ನಡುವಿನ ಮುಕ್ತ ಸಂಚಾರವನ್ನು ನಿಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ‘ಎಕ್ಸ್ (ಟ್ವಿಟರ್)’ ವೇದಿಕೆಯಲ್ಲಿ ಘೋಷಣೆ ಮಾಡಿದ್ದಾರೆ.

‘ಗಡಿಗಳನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಜನಸಂಖ್ಯೆ ಹೆಚ್ಚಳದಂಥ ಸಮಸ್ಯೆಗಳಿಂದಾಗಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ‘ಮುಕ್ತ ಸಂಚಾರ’ ರದ್ದುಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ನಾವು ಎಫ್‌ಎಂಆರ್ ಅನ್ನು ನಿಲ್ಲಿಸುತ್ತಿದ್ದೇವೆ, ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಈಶಾನ್ಯ ರಾಜ್ಯಗಳಾದ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲಗಳು ಮ್ಯಾನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಇಲ್ಲಿಯವರೆಗೆ, ಜನರು ಯಾವುದೇ ವೀಸಾ ಇಲ್ಲದೆ ಎರಡೂ ಕಡೆಯ ಗಡಿಯಿಂದ 16 ಕಿಲೋಮೀಟರ್‌ಗಳವರೆಗೆ ಮುಕ್ತವಾಗಿ ಸಂಚರಿಸಬಹುದಿತ್ತು. ಆದರೆ, ಇತ್ತೀಚೆಗೆ ಆ ದೇಶದಿಂದ ಭಾರತಕ್ಕೆ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ. ಅವರನ್ನು ತಡೆಯಲು ಗಡಿಯಲ್ಲಿ 1,643 ಕಿ.ಮೀ ಉದ್ದದ ಬೇಲಿ ನಿರ್ಮಿಸಲಾಗುವುದು ಎಂದು ಅಮಿತ್ ಶಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.

ಈಗಾಗಲೇ ಮಣಿಪುರದ ಗಡಿಯಲ್ಲಿ 10 ಕಿಲೋಮೀಟರ್ ಬೇಲಿ ಹಾಕುವ ಕಾಮಗಾರಿ ಪೂರ್ಣಗೊಂಡಿದೆ. ಹೈಬ್ರಿಡ್ ಕಣ್ಗಾವಲು ವ್ಯವಸ್ಥೆ ಮಾಡಲಾಗುತ್ತಿದೆ. ಮಣಿಪುರ ಮತ್ತು ಅರುಣಾಚಲದ ಆಯ್ದ ಸ್ಥಳಗಳಲ್ಲಿ ಪ್ರತಿ ಕಿಲೋಮೀಟರ್ ಗೆ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವ ಪ್ರಾಯೋಗಿಕ ಯೋಜನೆಗಳು ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!