ಹೊಸದಿಗಂತ ವರದಿ, ರಾಯಚೂರು:
ನಗರದ ಸಹಾಯಕ ಆಯುಕ್ತರ ಕಚೇರಿಯ ಡಿ ದರ್ಜೆ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಎಸಿ ಕಚೇರಿಯ ಭೂ ದಾಖಲೆಗಳ ವಿಭಾಗದ ಕೀಪರ್ ಹುದ್ದೆಯಲ್ಲಿದ್ದ ವಾಸೀಂ ಚೌಧರಿ (೪೦) ಗುರುವಾರ ಸಂಜೆ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.
ಮಧ್ಯಾಹ್ನದವರೆಗೂ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಸಂಜೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಈಜುಕೊಳದ ಹತ್ತಿರ ವಾಹನಗಳಿಗೆ ಬಳಸುವ ಕೂಲೆಂಟ್ ವಾಟರ್ ಜತೆಗೆ ಆಸಿಡ್ ಬೆರೆಸಿ ಕುಡಿದಿದ್ದಾನೆ ಎಂದು ತಿಳಿದು ಬಂದಿದೆ.
ನರಳಾಡುತ್ತಿದ್ದ ಈತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ಕಳುಹಿಸಿದ್ದರು. ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಆಯುಕ್ತೆ ಮಹಿಬೂಬಿ, ವಾಸಿಂ ಕಚೇರಿಯಲ್ಲಿ ಚನ್ನಾಗಿ ಕೆಲಸ ಮಾಡುತ್ತಿದ್ದ. ಯಾವುದೇ ರೀತಿಯ ಒತ್ತಡಗಳು ಇರಲಿಲ್ಲ. ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹ ಮರಳಿ ತಂದ ಬಳಿಕ ಪತ್ನಿ ಹೇಳಿಕೆ ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.