ಹೊಸದಿಗಂತ ವರದಿ,ಮೈಸೂರು:
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಐಷಾರಾಮಿ ಕಾರುಗಳಲ್ಲಿ ಬಂದಿದ್ದಾರೆ. ಅವರು ನಿಜವಾದ ರೈತರಲ್ಲ. ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವರು ಖಲಿಸ್ತಾನಿಗಳು. ಈ ಪ್ರತಿಭಟನೆ ಟೂಲ್ ಕಿಟ್ ನ ಒಂದು ಭಾಗ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಂಬoಧಪಟ್ಟ ಇಲಾಖೆಗಳ ಸಚಿವರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆದರೂ ಈ ಬೆಳವಣಿಗೆಯಿಂದ ಕೇಂದ್ರ ಸರ್ಕಾರಕ್ಕೆ ಮುಜುಗರವಾಗಿದೆ. ಪ್ರತಿಭಟನೆಯಿಂದ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನುಡಿದರು. ೨೦೨೪ರ ಚುನಾವಣೆಯಲ್ಲಿ ೪೦೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ. ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿ ಆಗಲಿದ್ದಾರೆ. ಇದಕ್ಕೆ ಅಡ್ಡಿ ಉಂಟುಮಾಡಲು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ನುಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅರ್ಹತೆ ನನಗೂ ಇದೆ. ಹಾಗಾಗಿ ನಾನು ಟಿಕೆಟ್ ಆಕಾಂಕ್ಷಿ. ಪಕ್ಷ ಅವಕಾಶ ನೀಡಿದರೆ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದನಿದ್ದೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆಂದು ಹೇಳಿದರು. ಪೊಲೀಸ್ ಅಧಿಕಾರಿಯಾಗಿ ರಾಜ್ಯದ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಮೈಸೂರು, ಕೊಡಗು ಭಾಗದಲ್ಲಿಯೂ ಉತ್ತಮ ಕೆಲಸ ಮಾಡಿದ್ದೇನೆ. ಯಾರದೇ ರಕ್ತ ನೆಲದ ಮೇಲೆ ಬೀಳದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇನೆ. ಇದೆಲ್ಲವೂ ಈ ಭಾಗದ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.
ಬ್ರಾಹ್ಮಣ ಸಮಾಜದ ಮುಂದೆ ಹಲವಾರು ಸವಾಲುಗಳಿವೆ. ದಿಟ್ಟವಾದ ಹೆಜ್ಜೆ ಇಡಲು ಚಿಂತನೆ ಮಾಡುತ್ತಿದ್ದೇವೆ. ಮುಜುಗರ, ಸೋಲಿನ ಭಯ ಬಿಟ್ಟು ಮುನ್ನುಗ್ಗಬೇಕು. ನಾವು ಸಂಘಟಿತರಾಗಲು ಅಸಮರ್ಥರಾಗಬಾರದು. ನಮ್ಮ ಸಮಾಜದ ಮೇಲೆ ಎಲ್ಲಾ ಸಮುದಾಯದವರಿಗೆ ಗೌರವವಿದೆ. ಪ್ರತಿಷ್ಠಿತ ಹುದ್ದೆಗಳನ್ನು ನಮ್ಮ ಸಮಾಜದವರು ಅಲಂಕರಿಸಿದ್ದಾರೆ. ಹಂಗರ್ ಫಾರ್ ಪವರ್ ಇದ್ದರೇನೇ ನಾವು ಮುಂದೆ ಬರಲು ಸಾಧ್ಯ ಎಂದರು.