ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾಶತಕ ಸಿಡಿಸಿ ಮಿಂಚಿದರೆ, ಪಾದಾರ್ಪಣೆ ಪಂದ್ಯವನ್ನಾಡುತ್ತಿರುವ ಸರ್ಫರಾಜ್ ಖಾನ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಮೊದಲ ದಿನದಾಟದ ಅಂತ್ಯದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿದೆ.
ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು.
6 ಓವರ್‌ನೊಳಗಾಗಿ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ 5ನೇ ಕ್ರಮಾಂಕದಲ್ಲಿ ಬಡ್ತಿಪಡೆದು ಕ್ರೀಸ್‌ಗಿಳಿದ ರವೀಂದ್ರ ಜಡೇಜಾ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ರೋಹಿತ್ ಶರ್ಮಾ 157 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾಗೆ ಜಡೇಜಾ ಉತ್ತಮ ಸಾಥ್ ನೀಡಿದರು. ಈ ಜೋಡಿ 329 ಎಸೆತಗಳನ್ನು ಎದುರಿಸಿ 204 ರನ್‌ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ 196 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 131 ರನ್ ಬಾರಿಸಿ ಮಾರ್ಕ್ ವುಡ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಜಡೇಜಾ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಜಡೇಜಾ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಸದ್ಯ ಜಡೇಜಾ 212 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 110 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನು ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ರನ್ ಕಲೆಹಾಕಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿರುವ ಸರ್ಫರಾಜ್ ಖಾನ್ ಪಾದಾರ್ಪಣೆ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅರ್ಧಶತಕ ಸಿಡಿಸುತ್ತಿದ್ದಂತೆಯೇ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಪತ್ನಿಗೆ ಪ್ಲೈಯಿಂಗ್ ಕಿಸ್ ಕೊಟ್ಟು ಗಮನ ಸೆಳೆದರು. ಅಂತಿಮವಾಗಿ ಸರ್ಫರಾಜ್ ಖಾನ್ 66 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 62 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.