ಸಂದೇಶ್‌ಖಾಲಿ ಪ್ರಕರಣ: ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಬಂಗಾಳ ಸಿಎಂ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ 17 ಮಂದಿಯನ್ನು ಬಂಧಿಸಲಾಗಿದ್ದು, ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಯಾರಿಗೇ ಆಗಲಿ ಅನ್ಯಾಯವಾಗಲು ಬಿಟ್ಟಿಲ್ಲ, ಬಿಡುವುದೂ ಇಲ್ಲ’ ಎಂದರು.

ಟಿಎಂಸಿ ನಾಯಕರಿಂದ ಸಂದೇಶ್‌ಖಾಲಿ ನಿವಾಸಿಗಳ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆ ನೀಡಿದ್ದಾರೆ.

‘ಸಂದೇಶ್‌ಖಾಲಿಯಲ್ಲಿ ಪರಿಸ್ಥಿತಿ ಮೇಲೆ ನಿಗಾ ಇಡಲಾಗಿದೆ. ಅಲ್ಲಿನ ದೌರ್ಜನ್ಯ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲು ಪೊಲೀಸರ ತಂಡವನ್ನು ರಚಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಸದಸ್ಯರ ತಂಡವನ್ನು ಸಹ ಅಲ್ಲಿಗೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಸಂದೇಶ್‌ಖಾಲಿಯಲ್ಲಿ ಪ್ರತಿಭಟನೆ ಮುಂದುವರಿಯಿತು. ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ಟಿಎಂಸಿ ನಾಯಕ ಶಹಜಹಾನ್ ಶೇಖ್‌ ಹಾಗೂ ಅವರ ಬೆಂಬಲಿಗರನ್ನು ಬಂಧಿಸುವಂತೆ ಒತ್ತಾಯಿಸಿದರು.

ಕಲಾಪ ಆರಂಭವಾದಾಗ, ಸಂದೇಶ್‌ಖಾಲಿಯಲ್ಲಿ ಸ್ಥಳೀಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಈ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.ಈ ವೇಳೆ, ಮಮತಾ ಬ್ಯಾನರ್ಜಿ ಸದನದಲ್ಲಿ ಇರಲಿಲ್ಲ.ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿ ಮುಖ್ಯಸಚೇತಕ ಮನೋಜ್‌ ತಿಗ್ಗಾ ಹಾಗೂ ಶಾಸಕರು, ಮುಖ್ಯಮಂತ್ರಿ ಬ್ಯಾನರ್ಜಿ ಅವರು ಈ ವಿಷಯವಾಗಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದರು.ಬಿಜೆಪಿ ಶಾಸಕರ ಬೇಡಿಕೆಗೆ ಒಪ್ಪದ ಸಭಾಧ್ಯಕ್ಷ ಬಿಮನ್‌ ಬಂದೋಪಾಧ್ಯಾಯ, ಶಿಸ್ತಿನಿಂದ ವರ್ತಿಸುವಂತೆ ಸೂಚನೆ ನೀಡಿದರು. ಇದಕ್ಕೆ ಕಿವಿಗೊಡದ ಬಿಜೆಪಿ ಶಾಸಕರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಸದನದಿಂದ ಹೊರ ನಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!