Sunday, January 11, 2026

ನಿಧಿಗಾಗಿ ಮಗುವನ್ನು ಬಲಿ ಕೊಡೋಕೆ ಹೊರಟ ಪೋಷಕರು! ಪುಟ್ಟ ಕಂದಮ್ಮನನ್ನು ರಕ್ಷಿಸಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಧಿ ಸಿಗಲಿದೆ ಎಂಬ ಅಂಧನಂಬಿಕೆಯಿಂದ ಎಂಟು ತಿಂಗಳ ಗಂಡು ಮಗುವನ್ನು ಬಲಿ ನೀಡಲು ಪೂಜೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣವು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಸೈಯದ್ ಇಮ್ರಾನ್ ಎಂಬ ವ್ಯಕ್ತಿಯ ಮನೆಯಲ್ಲಿ ನಿಧಿಗಾಗಿ ವಿಶೇಷ ಪೂಜೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಆಧರಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಯು ಎಂಟು ತಿಂಗಳ ಹಿಂದೆ ಮತ್ತೊಬ್ಬರಿಂದ ಗಂಡು ಮಗುವನ್ನು ಖರೀದಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ: Kitchen tips | ತಿಂಗಳಿಗೊಮ್ಮೆ ಒಂದು ಗ್ಯಾಸ್ ಲೈಟರ್ ಹಾಳಾಗ್ತಿದೆ! ಅದನ್ನ ಎಸೀಬೇಡಿ, ಮನೆಯಲ್ಲೇ ರಿಪೇರಿ ಮಾಡಿ!

ಜನವರಿ 3ರಂದು ಹುಣ್ಣಿಮೆ ದಿನದಂದು ಮಗು ಬಲಿ ನೀಡುವ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಅಪರಿಚಿತ ವ್ಯಕ್ತಿಯೊಬ್ಬರಿಂದ ಮಕ್ಕಳ ಸಹಾಯವಾಣಿಗೆ ಲಭಿಸಿತ್ತು. ಈ ಮಾಹಿತಿ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಆರೋಪಿಯ ಮನೆಗೆ ದಾಳಿ ಮಾಡಿದಾಗ, ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಸಿರುವ ಜಾಗವನ್ನು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸುದೀರ್ಘ ಪರಿಶೀಲನೆ ನಡೆಸುತ್ತಿದ್ದಾರೆ.

ರಕ್ಷಿಸಲಾದ ಎಂಟು ತಿಂಗಳ ಶಿಶುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದು ಶಿಶು ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!