ಮಂಗಳೂರಿನ ಶಾಲೆಯಲ್ಲಿ ಹಿಂದು ನಿಂದನೆ: ಸಮಗ್ರ ತನಿಖೆಗೆ ಐಎಎಸ್ ಅಧಿಕಾರಿ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದು ಧರ್ಮದ ನಿಂದನೆ ಮಾಡಿದ ಪ್ರಕರಣ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಶೀಘ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದರು.

ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿಯವರು ಹೇಳಿದಾಕ್ಷಣ ಪ್ರಕರಣ ಹಿಂಪಡೆಯಲಾಗದು. ತನಿಖೆ ನಡೆಯುತ್ತಿದ್ದು, ತಪ್ಪು ಎಸಗಿರುವುದು ದೃಢಪಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ಹೇಳಿದರು.

ಡಾ.ಭರತ್ ಶೆಟ್ಟಿ ಮತ್ತು ಶರಣ್‌ಪಂಪ್‌ವೆಲ್ ಮೇಲೆ ಸುಳ್ಳು ಕೇಸು ದಾಖಲಾಗಿಲ್ಲ. ಎಲ್ಲಿ ಹೇಳಿಕೆ ನೀಡಿದರೂ ಅದು ತಪ್ಪೇ. ಪ್ರಚೋದನಕಾರಿ ಹೇಳಿಕೆ ವಿರುದ್ಧ ಕೇಸು ಹಾಕಲಾಗಿದೆ. ಪೊಲೀಸ್ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಶಿಕ್ಷಕಿಯ ವಿರುದ್ಧವೂ ಶಿಕ್ಷಣ ಇಲಾಖೆ ತನಿಖೆ ನಡೆಸುತ್ತದೆ. ಪೊಲೀಸರು ತನಿಖೆ ನಡೆಸುವುದಿಲ್ಲ, ಹಾಗಾಗಿ ಎಫ್‌ಐಆರ್ ದಾಖಲಿಸಿಲ್ಲ. ಯಾರು ತಪ್ಪು ಮಾಡಿದರೂ ತನಿಖೆಯಲ್ಲಿ ತಿಳಿದುಬರುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!