ನಿಮ್ಮ ಬಜೆಟ್ ನೋಡಿದ್ರೆ ಯಾವನೇ ಆದ್ರೂ ನಗ್ತಾನೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ನಿಮ್ಮ ಬಜೆಟ್ ನೋಡಿದ್ರೆ ಯಾವನೇ ಆದ್ರೂ ನಗ್ತಾನೆ. ಬಜೆಟ್ ಮಂಡಿಸಿದ ನೀವೆಷ್ಟು ಮಹಾನ್ ಪ್ರವೀಣರು ಎಂಬುದು ನನಗೆ ಗೊತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಹಾಸನ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮಗೆ ಬಜೆಟ್ ಅಂದರೆ ಏನೆಂದು ಗೊತ್ತಿಲ್ಲ ಅಂತಾ ಹೇಳಿದ್ದಾರೆ. ಅವರ ನಡೆವಳಿಕೆ ನೋಡಿದ್ರೆ ಹಿಂದಿನ ಮಾತಿನಂತೆ ನೂರು ಸುಳ್ಳು ಹೇಳಿ ಸತ್ಯ ನಂಬಿಸುವಂತೆ ಹೊರಟಿದ್ದಾರೆ. ಇವರೇ ಸತ್ಯ ಹರಿಶ್ಚಂದ್ರರಂತೆ ಹೇಳಿಕೊಂಡು ಹೊರಟಿದ್ದಾರೆ. ಕಾರ್ಯಕ್ರಮದ ಹೆಸರಿನಲ್ಲಿ ನಾಡಿನ ಜನರ ತೆರಿಗೆ ಹಣವನ್ನು ಹಾಳುಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಸಾಲ ಮಾಡಿದೆ ಅಂತಿದ್ದೀರಿ. ಈಗ ನಿಮ್ಮನ್ನು ನಾನು ಕೇಳ್ತೇನೆ, ನಾನು ಸಿಎಂ ಆಗಿದ್ದಾಗ ಎಷ್ಟು ಸಾಲ ಇತ್ತು, ಈಗ ಎಷ್ಟಾಗಿದೆ? ಆಗ ಕೇವಲ 45 ಸಾವಿರ ಕೋಟಿ ಇತ್ತು. ಈಗ ಆರು ಲಕ್ಷ ಕೋಟಿಗೂ ಅಧಿಕ ಸಾಲ ಆಗಿದೆ. ಗ್ಯಾರಂಟಿ ಯೋಜನೆ ಅಂತಿರಲ್ಲ, ಇದಕ್ಕೆ ಸಾಲ ಮಾಡಿ ಕೊಡ್ತಾ ಇದ್ದೀರಿ ಇದನ್ನು ನೀವು ತೀರಿಸಲ್ಲ ಜನರೇ ತೀರಿಸಬೇಕು. ಮುಂದೆ ಬರೋ ಸರ್ಕಾರ ತೀರಿಸಬೇಕು. ಸಾಲದ ಹೊರೆ ಹೊರಿಸಿ ತೆರಿಗೆ ಏರಿಕೆ ಮಾಡಿ ಸ್ವೇಚ್ಛಾಚಾರದಿಂದ ನಡೆದುಕೊಳ್ಳುತ್ತಿದ್ದೀರಲ್ಲ ಇದಕ್ಕೇ ಏನೆನ್ನಬೇಕು? ಜನರಿಗೆ 2 ಸಾವಿರ ಹಣ ಯಾರಪ್ಪನ ಮನೆ ದುಡ್ಡಿನಿಂದ ಕೊಡ್ತಿದ್ದೀರ? ಐವತ್ತೆರಡು ಸಾವಿರ ಕೋಟಿ ಕೊಡಲು ಒಂದು ಲಕ್ಷ ಕೋಟಿ ಸಾಲ ಮಾಡಿದಿರಿ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿಯವರು ಬಜೆಟ್‌ನಲ್ಲಿ ಏನಿಲ್ಲ ಅಂದಿದ್ದಕ್ಕೆ ನಗುತ್ತಿದ್ದಿರಲ್ಲಾ, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಎಂದರಲ್ಲಾ ಹಾಗಾದರೆ ಈ ಸಾಲ ತೀರಿಸುವವರು ಯಾರು? ಒಂದು ಲಕ್ಷ ಕೋಟಿ ಸಾಲ ಮಾಡಿ ೫೨ ಸಾವಿರ ಕೋಟಿ ಗ್ಯಾರೆಂಟಿಗೆ ನೀಡುತ್ತಿದ್ದೀರಿ. ಈ ಸಾಲವನ್ನ ಬಡವರ ಮೇಲೆ ಹೇರುತ್ತಿದ್ದೀರಿ. ಇದಕ್ಕೆ ಬಡವರ ಬಜೆಟ್ ಎಂದು ಹೇಳುತ್ತಾರಾ? ಒಂದು ರೂನಲ್ಲಿ ೬೫ ಪೈಸೆಯನ್ನ ಸರ್ಕಾರಕ್ಕೆ ಬಳಸಿ ಅಭಿವೃದ್ಧಿ ಎಲ್ಲಿ ಮಾಡುತ್ತೀರಿ? ನಿಮ್ಮಲ್ಲಿರೋ ಮಾಜಿ ಮುಖ್ಯಮಂತ್ರಿಗಳನ್ನ ಟೆಂಟ್ ಕಿತ್ತು ಬಿಜೆಪಿಗೆ ಕಳಿಸುತ್ತಿದ್ದೀರಲ್ಲಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನವರು ಬಿಜೆಪಿಯೊಂದಿಗೆ ವಿಲೀನ ಆಗ್ತಿದ್ದಾರೆ ಅಂತಾ ಹೇಳ್ತಿದ್ದೀರಲ್ಲ, 2018ರಲ್ಲಿ ನಮ್ಮ ಸಂಬಂಧ ಬೆಳೆಸಿದ್ರಲ್ಲ ನಿಮ್ಮ ಕೊಡುಗೆ ಏನು? ಪ್ರಧಾನಿ ಮೋದಿಯವರು ಐದು ವರ್ಷ ಅಧಿಕಾರ ಮಾಡು ಅಂದ್ರು. ನಾನು ಇವರ ಸಂಬಂಧ ಮಾಡಿದೆ. ಕೊನೆಗೆ ನಮ್ಮ ಕತ್ತು ಕುಯ್ದರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!