ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಅನುದಾನ ಘೋಷಣೆ

ಹೊಸದಿಗಂತ ವರದಿ, ಬೆಂಗಳೂರು:

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ (ಪಿಎಂ ಉಷಾ) ಯೋಜನೆಯಡಿ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯ ಉನ್ನತೀಕರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ೧೦೦ ಕೋಟಿ ರೂ. ಅನುದಾನ ಘೋಷಣೆಯಾಗಿದೆ.

ದೇಶದ ೧,೪೭೨ ವಿಶ್ವವಿದ್ಯಾಲಯಗಳಲ್ಲಿ ಕೇವಲ ೨೬ ವಿಶ್ವವಿದ್ಯಾಲಯಗಳು ಮಾತ್ರ ಮಲ್ಟಿ ಡಿಸಿಪ್ಲೀನರಿ ಎಜುಕೇಶನ್ ಅಂಡ್ ರಿಸರ್ಚ್ ಯೂನಿವರ್ಸಿಟಿ (ಎಂಇಆರ್‌ಯು) ಮಾನದಂಡ ಅಡಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಬೆಂಗಳೂರು ವಿವಿ ಕೂಡ ಒಂದಾಗಿದ್ದು, ನ್ಯಾಕ್ ಎ++ ಮಾನ್ಯತೆ ಪಡೆದಿದ್ದ ಬೆಂಗಳೂರು ವಿವಿ ಇದೀಗ ಪಿಎಂ ಉಷಾ ಅನುದಾನ ಪಡೆದುಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿದೆ.

ಈ ಕುರಿತು ವಿವಿ ಕುಲಪತಿ ಡಾ.ಜಯಕರ ಎಸ್.ಎಂ. ಮಾತನಾಡಿ, ಪಿಎಂ ಉಷಾ ಯೋಜನೆಯಡಿ ೧೦೦ ಕೋಟಿ ಘೋಷಣೆಯಾಗಿರುವುದು ಇಡೀ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದೆ. ಯೋಜನೆಯ ಎಲ್ಲಾ ಮಾನದಂಡಗಳನ್ನು ತಲುಪಿ ವಿಶ್ವವಿದ್ಯಾಲಯವು ಅನುದಾನ ಪಡೆದುಕೊಂಡಿದೆ. ಇದು ವಿವಿಯ ಸಾಧನೆಯ ಪ್ರತೀಕ. ಸಂಶೋಧನೆ ಮತ್ತು ಅನ್ವೇಷಣೆಗಳಿಗೆ ನಿರಂತರ ಆದ್ಯತೆ ನೀಡಿದ್ದ ವಿವಿಗೆ ಈ ಯೋಜನೆಯ ಮೂಲಕ ಮತ್ತಷ್ಟು ಬಲ ತಂದಿದೆ. ೧೦೦ ಕೋಟಿ ರೂ. ಅನುದಾನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಮರ್ಪಕವಾಗಿ ಬಳಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಅನುದಾನದಲ್ಲಿ ೫೦ ಕೋಟಿ ರೂ.ಗಳನ್ನು ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶೈಕ್ಷಣಿಕ ಕಟ್ಟಡಗಳು, ಬಯಲುರಂಗಮಂದಿರ ಮತ್ತು ಹಾಸ್ಟೆಲ್‌ಗಳನ್ನು ನಿರ್ಮಿಸಲು ೫೦ ಕೋಟಿ ರೂ.ಗಳನ್ನು ಮೀಸಲಿಡಲಿದ್ದೇವೆ. ಕ್ಯಾಂಪಸ್ ನೆಟ್‌ವರ್ಕಿಂಗ್ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್‌ಕ್ಲಾಸ್, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಸಂಪನ್ಮೂಲಗಳ ಡಿಜಿಟಲೀಕರಣ, ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ಯಾಂಪಸ್ ಮಾಡಲು ೩೦ ಕೋಟಿ ರೂ. ಮೀಸಲಿಡಲಾಗಿದೆ. ಜತೆಗೆ ಉಳಿದ ೨೦ ಕೋಟಿ ರೂ.ಗಳನ್ನು ಸುಧಾರಿತ ವೈಜ್ಞಾನಿಕ ಉಪಕರಣಗಳ ಖರೀದಿ ಮತ್ತು ವಿವಿಧ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಿವಿ ಕುಲಸಚಿವ ಶೇಕ್ ಲತೀಫ್ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ದೇಶಕ್ಕೆ ಮಾತ್ರ ಸೀಮಿತವಾಗದೆ ವಿಶ್ವದರ್ಜೆಯ ಮಾನ್ಯತೆ ಪಡೆದಿದೆ. ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಪೂರಕ ವಾತಾವರಣ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!