ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಮಂಗಳವಾರ) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಬೆಳಗ್ಗೆ 11.30ರ ಸುಮಾರಿಗೆ ಜಮ್ಮುವಿನ ಮೌಲಾನಾ ಆಜಾದ್ ಮೈದಾನದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 30.500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಹೊಸ ಸರ್ಕಾರಿ ನೇಮಕಾತಿಗಳಿಗೆ ಪ್ರಧಾನಿ ನೇಮಕಾತಿ ಆದೇಶಗಳನ್ನು ವಿತರಿಸಲಿದ್ದಾರೆ. ನಂತರ ಮೋದಿ ಅವರು ‘ವಿಕ್ಷಿತ್ ಭಾರತ್ ವಿಕ್ಷಿತ್ ಜಮ್ಮು’ ಕಾರ್ಯಕ್ರಮದ ಭಾಗವಾಗಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ ಜಮ್ಮುವಿನಲ್ಲಿ 2000 ಪ್ರಯಾಣಿಕರಿಗೆ ಪೀಕ್ ಅವರ್‌ನಲ್ಲಿ ಸೇವೆ ಸಲ್ಲಿಸುವ ಜಮ್ಮು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ. ಈ ಯೋಜನೆಯು 40,000 ಚದರ ಮೀಟರ್ ಪ್ರದೇಶದಲ್ಲಿದೆ. ಹೊಸ ಟರ್ಮಿನಲ್ ಕಟ್ಟಡ ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜಮ್ಮುವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ಮತ್ತು ಅರೆಸೇನಾ ಪಡೆಗಳು ನಗರ ಮತ್ತಿತರ ಕಡೆಗಳಲ್ಲಿ ವಾಹನಗಳ ತಪಾಸಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.