ಹೊಸದಿಗಂತ ವರದಿ,ನಾಗಮಂಗಲ :
ಸಚಿವ ಅಥವಾ ಸಂಸದರಾಗಲು ಹೊರಗಿನಿಂದ ಬರುವವರು ನಮ್ಮ ಜಿಲ್ಲೆಗೆ ನೆಂಟರಾಗುತ್ತಾರೆ ವಿನಹ ಮಗನಾಗುವುದಿಲ್ಲ. ಜಿಲ್ಲೆಯ ಜನರು ಸ್ವಾಭಿಮಾನಿಗಳು ಹೊರಗಿನವರನ್ನು ಒಪ್ಪುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಟ್ಟಮ್ಮ ದೇವಿಯ ನೂನತ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ದೇಶದ ಯಾವ ರಾಜ್ಯದವರಾದರೂ ಮಂಡ್ಯ ಸೇರಿದಂತೆ ರಾಷ್ಟ್ರದ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು. ಆದರೆ ಜಿಲ್ಲೆಯ ಜನರು ಇಷ್ಟ ಪಡುವಂತಹ ವ್ಯಕ್ತಿ ನಮ್ಮ ಜಿಲ್ಲೆಯವರೇ ಆಗಬೇಕು ಅನ್ನುವುದು ಸಹಜ ಎಂದರು.
ಈ ಹಿಂದೆ ಕೆ.ಗೋಪಾಲಯ್ಯ, ಆರ್.ಅಶೋಕ್, ರಾಮಚಂದ್ರೇಗೌಡ ಹೊರಗಿನವರು ಮಂತ್ರಿಯಾಗಿ ಎಷ್ಟು ಬಾರಿ ಜಿಲ್ಲೆಗೆ ಬರುತ್ತಿದ್ದರೆಂಬುದು ಜನತೆಗೆ ಗೊತ್ತಿದೆ. ಅವರು ನೆಂಟರ ರೀತಿ ಜಿಲ್ಲೆಗೆ ಬಂದುಹೋಗುತ್ತಿದ್ದರು. ಇಲ್ಲಿ ಶಾಸಕನಾದರೂ ಅಷ್ಟೇ, ಸಂಸದನಾದರೂ ಅಷ್ಟೆ. ಜಿಲ್ಲೆಗೆ ನೆಂಟರ ಅವಶ್ಯಕತೆಯಿಲ್ಲ, ಜಿಲ್ಲೆಯ ಮಗನ ಅವಶ್ಯಕತೆಯಿದೆ ಎಂದು ಹೇಳಿದರು.
ಈ ಹಿಂದೆ ಯಾರೂ ಸಹ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಜನರಿಗೆ 5ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಅದರೊಟ್ಟಿಗೆ ಯಾವುದೇ ಸೌಲಭ್ಯಗಳನ್ನು ಕಡಿಮೆ ಮಾಡಿಲ್ಲ. ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ. ಇದುವರೆಗೂ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಕೊಡುಗೆಯನ್ನು ಬೇರೆ ಯಾರೂ ನೀಡಿಲ್ಲ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಕಾಂಗ್ರೇಸ್ ಪಕ್ಷದ ಕೈಹಿಡಿಯಲಿದ್ದಾರೆ ಎಂದ ಅವರು, ನಮ್ಮ ತಾಲೂಕಿನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು ಅಂತಿಮವಾಗಿ ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ಪಕ್ಷ ತೀರ್ಮಾನಿಸಲಿದೆ ಎಂದರು