ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಹನ ಸವಾರರ ಸಣ್ಣದೊಂದು ಅಜಾಗರೂಕತೆ ಎಂತಹ ಭೀಕರ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಮಲಾಪುರದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಲಾರಿಯನ್ನು ಎಡಭಾಗದಿಂದ ಓವರ್‌ಟೇಕ್ ಮಾಡಲು ಹೋದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಲಾರಿಯ ಚಕ್ರದಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜಿಲ್ಲೆಯ ಕಮಲಾಪುರ ರಸ್ತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯ ಹಿಂದೆ ಬರುತ್ತಿದ್ದ ಬೈಕ್ ಸವಾರ, ಲಾರಿಯನ್ನು ಎಡಭಾಗದಿಂದಲೇ ಹಿಂದಿಕ್ಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಬೈಕ್‌ನ ವೇಗ ಹೆಚ್ಚಿಸಿದಾಗ ರಸ್ತೆಯ ಬದಿಯಲ್ಲಿ ಬೈಕ್ ಸ್ಕಿಡ್ ಆಗಿದೆ. ಪರಿಣಾಮವಾಗಿ ಸವಾರ ನೇರವಾಗಿ ಲಾರಿಯ ಹಿಂದಿನ ಚಕ್ರದ ಅಡಿಗೆ ಬಿದ್ದಿದ್ದಾನೆ.
ಈ ಇಡೀ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರೀ ವಾಹನಗಳನ್ನು ಓವರ್‌ಟೇಕ್ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸಿದ್ದೇ ಈ ಸಾವಿಗೆ ನೇರ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

