ಹೊಸದಿಗಂತ ವರದಿ, ದಾವಣಗೆರೆ:
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನನಗೆ ಸಿಗುತ್ತೋ, ಮಗನಿಗೆ ಸಿಗುತ್ತೋ ಗೊತ್ತಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲೇಬೇಕು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ತಾಲೂಕಿನ ವಡ್ಡಿನಹಳ್ಳಿ ಗ್ರಾಮದಲ್ಲಿ ಬುಧವಾರ ಸಿ.ಆರ್.ಸಿ. ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆಂದು ದೆಹಲಿಯಲ್ಲಿ ಹೋಗಿದ್ದೆ ಹೊರತು ಟಿಕೆಟ್ ಕೇಳಲು ಹೋಗಿಲ್ಲ. ನಾನು ಇದುವರೆಗೂ ಯಾರಿಗೂ ಟಿಕೆಟ್ ಕೇಳಿಲ್ಲ. ಅವರೇ ಕೊಡುತ್ತಾ ಬರುತ್ತಿದ್ದಾರೆ. ಇನ್ನು ಮುಂದೆಯೂ ಕೊಡುತ್ತಾರೆ. ಜನರು ಆಶೀರ್ವಾದ ಮಾಡುತ್ತಾರೆ. ನನಗೇ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಆಗದವರು ಬೇರೆ ಪಕ್ಷದಲ್ಲಿ ಮಾತ್ರವಲ್ಲದೆ, ನಮ್ಮ ಪಕ್ಷದಲ್ಲೂ ಇದ್ದಾರೆ. ಸ್ಥಳೀಯರು ಹಾಗೂ ಹೊರಗಿನ ಜಿಲ್ಲೆಯವರು ಅಂತಾ ಮೊದಲು ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದರು. ಈಗ ಅದನ್ನೇ ನಮ್ಮ ಪಕ್ಷದ ಕೆಲ ಆಗದವರು ಕಾಪಿ ಮಾಡಿ ಹೇಳುತ್ತಿದ್ದಾರೆ. ನಾನೇನೂ ಟಿಕೆಟ್ ಕೇಳಲು ಹೋಗಿಲ್ಲ. ಬೇಕಾದವರು ಟಿಕೆಟ್ ಕೇಳುತ್ತಾರೆ. ಮೊದಲಿನಿಂದಲೂ ಟಿಕೆಟ್ ಗಾಗಿ ಸ್ಪರ್ಧೆ ಇದೆ. ಈಗ ಇನ್ನಷ್ಟು ಹೆಚ್ಚಾಗಿದೆ. ನಾನು ಅದನ್ನೆಲ್ಲ ಯೋಚನೆ ಮಾಡಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಪರ ಕೆಲಸ ಮಾಡಲೇಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.
ನನ್ನ ಮಗನಿಗೆ ಟಿಕೆಟ್ ಸಿಗುವುದು ಭಗವಂತನ ಇಚ್ಛೆ. ಮಗನಿಗೆ ಮಾತ್ರವಲ್ಲದೆ ಯಾರಿಗೇ ಟಿಕೆಟ್ ಕೊಟ್ಟರೂ ಒಪ್ಪಿಗೆ ಇದೆ. ನನ್ನ ಮಗ ಯಾಕೆ ಅಭ್ಯರ್ಥಿ ಆಗಬಾರದು. ಮೂರ್ನಾಲ್ಕು ತಲೆಮಾರಿನಿಂದ ಅಧಿಕಾರ ಅನುಭವಿಸುತ್ತಾರೆ ಅಂತಾ ಹೇಳೋರು ಹೇಳಿಕೊಳ್ಳಲಿ. ರಾಜ್ಯದಲ್ಲಿ ಕೂಡ ತಲೆಮಾರುಗಳಿಂದ ರಾಜಕೀಯ ಮಾಡಿಕೊಂಡು ಬಂದವರು ಸಾಕಷ್ಟು ಜನ ಇದ್ದಾರೆ. ಜನ ಆಶೀರ್ವಾದ ಮಾಡಿದರೆ ಗೆಲ್ಲುತ್ತೇವೆ ಎಂದು ಅವರು ಸಮರ್ಥಿಸಿಕೊಂಡರು.
ಬಿಜೆಪಿಯ ಒಳ್ಳೆಯ ಕೆಲಸಗಳನ್ನು ಹೀಯಾಳಿಸುವುದು, ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವುದೇ ವಿರೋಧ ಪಕ್ಷದವರ ಕೆಲಸ. ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ಅಕ್ಕಿ ಕಳಪೆ ಎನ್ನಲು ಸಚಿವ ಕೆ.ಹೆಚ್.ಮುನಿಯಪ್ಪ ಯಾರು? ಕಾಂಗ್ರೆಸಿಗರು ಚುನಾವಣೆಗೆ ಮುನ್ನ ಕೊಡುತ್ತೇವೆ ಎಂದಿದ್ದ 10 ಕೆಜಿ ಉಚಿತ ಅಕ್ಕಿಯನ್ನೇ ಈವರೆಗೆ ಕೊಟ್ಟಿಲ್ಲ. ಮೊದಲು ಅದನ್ನು ಕೊಡಲು ಹೇಳಿ ಎಂದು ಅವರು ತಿರುಗೇಟು ನೀಡಿದರು.
ದಿವ್ಯಾಂಗರ ಪುನರ್ವಸತಿ, ಚಿಕಿತ್ಸೆ, ತರಬೇತಿಗೆ ವಿಶೇಷವಾಗಿ ಕರ್ನಾಟಕ, ಗೋವಾ ರಾಜ್ಯಗಳಿಗೆ ಸಂಬಂಧಿಸಿದಂತೆ ಸಂಯುಕ್ತ ಪ್ರಾದೇಶಿಕ ಕೇಂದ್ರವು ದಾವಣಗೆರೆಗೆ ಸಿಕ್ಕಿರುವುದು ನಮ್ಮ ಪುಣ್ಯ. ಇದು 58 ಕೋಟಿ ರೂ. ಯೋಜನೆಯಾಗಿದ್ದು, ಸಧ್ಯಕ್ಕೆ 28 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಇನ್ನುಳಿದ ಕಾಮಗಾರಿ ಆಗುತ್ತದೆ. 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕೂಡ ಆಗಬೇಕೆಂಬ ಯೋಜನೆ ಇದೆ ಎಂದು ಅವರು ತಿಳಿಸಿದರು.