ಹೊಸದಿಗಂತ ವರದಿ ಮೈಸೂರು:
ಚಾಮರಾಜನಗರ ಲೋಕಸಭೆ ಕ್ಷೇತ್ರಕ್ಕೆ ಇಬ್ಬರು ಅಳಿಯಂದಿರು ಆಕಾಂಕ್ಷಿಗಳಾಗಿದ್ದಾರೆ. ನಾನು ಯಾರ ಮೇಲು ಪ್ರಭಾವ ಬೀರಲ್ಲ. ಸ್ಥಳೀಯವಾಗಿ ಸಮೀಕ್ಷೆ ಮಾಡಿ, ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ಮಾಡಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧಾರ ಮಾಡುತ್ತಾರೆ ಎಂದು ಬಿಜೆಪಿಯ ಹಿರಿಯ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.
ಶನಿವಾರ ಮೈಸೂರಿನ ಜಯಲಕ್ಷಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಅವರು ಇಂದು ನನ್ನನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಪರಸ್ಪರ ಒಂದಷ್ಟು ಮಾತುಕತೆ ನಡೆಸಿದ್ದಾರೆ. ನಾನು ಒಂದಷ್ಟು ನನ್ನ ರಾಜಕೀಯ ಅನುಭವದಿಂದ ಒಂದಷ್ಟು ಸಲಹೆ ಸೂಚನೆಗಳನ್ನು ಅವರಿಗೆ ಕೊಟ್ಟಿದ್ದೇನೆ. ಅದನ್ನೆಲ್ಲ ಬಹಿರಂಗವಾಗಿ ಹೇಳಿಕೊಳ್ಳಲಿಕ್ಕೆ ಆಗಲ್ಲ ಎಂದರು.
ಲೋಕಸಭೆ ಚುನಾವಣಾ ಮೈಸೂರಿಗೆ ಮಾತ್ರ ಅಲ್ಲ ಇಡೀ ದೇಶಕ್ಕೆ ಬಂದಿದೆ. ನಾನು ರಾಜಕೀಯಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ನಾನೂ ಒಬ್ಬ. 14 ಬಾರಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದೇನೆ. ನನ್ನ ರಾಜಕೀಯ ಸಲಹೆಗಳನ್ನು ಕೇಳಿದ್ದಾರೆ. ಹಾಗಾಗಿ ನಾನು ಒಂದಷ್ಟು ಸಲಹೆ ಸೂಚನೆ ನೀಡಿದ್ದೇನೆ. ಅದನ್ನ ಬಹಿರಂಗವಾಗಿ ಹೇಳಲಿಕ್ಕೆ ಹೋಗೋಲ್ಲ ಎಂದರು.
ಮಾರ್ಚ್ 17 ಕ್ಕೆ ನಾನು ಚುನಾವನಾ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನಾನು ಈಗ ಬಿಜೆಪಿ ಸಂಸದನಾಗಿ ಬಿಜೆಪಿಯಲ್ಲೇ ಇದ್ದು, ನಿವೃತ್ತಿಯಾಗುತ್ತಿದ್ದೇನೆ. ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಯಾವುದೇ ಪ್ರಚಾರಕ್ಕೆ ಹೋಗಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಎಲ್ಲೂ ಹೋಗಲ್ಲ.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಮ್ಮ ಕುಟುಂಬದಿಂದ ಇಬ್ಬರು ಅಳಿಯಂದಿರು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ. ಅಳಿಯಂದರಾದ ಮೋಹನ್ ಹಾಗೂ ಹರ್ಷವರ್ಧನ್ ತುಂಬಾ ಅನ್ಯೋನ್ಯವಾಗಿದ್ದಾರೆ.
ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಪಕ್ಷದ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಹೇಳಿದ್ದೇನೆ ಎಂದರು.