ಹೊಸದಿಗಂತ ವರದಿ, ಮಡಿಕೇರಿ:
ವಿಶ್ವದ ಅತ್ಯಂತ ಎತ್ತರದ ಶಿಖರದ ತುತ್ತ ತುದಿಯನ್ನು ಏರಿ ಕನ್ನಡ ಬಾವುಟ ಹಾರಿಸಿದ ಪ್ರಥಮ ಕನ್ನಡಿಗ ವಿಕ್ರಮ್ ಚಂದ್ರನಾಯಕ್ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಿ ಆಡಳಿತಾತ್ಮಕ ನೆರವು ಕೋರಿದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಹಸಿ ಯುವಕನಾದ ಸಿ.ವಿಕ್ರಮ್, ಗಸ್ತು ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2018 ರಲ್ಲಿ 8848.86 ಮೀ ಎತ್ತರದ ಜಗತ್ತಿನ ಅತ್ಯಂತ ತುತ್ತ ತುದಿಯಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಕನ್ನಡಿಗನಾಗಿ ಸಾಧನೆ ಮಾಡಿದ್ದರು.
ಈಗ ಅವರಿಗೆ ಸರ್ಕಾರಿ ಸೇವೆಯಲ್ಲಿ ಪದೋನ್ನತಿ ಸಂಬಂಧಿಸಿದಂತೆ ಕ್ಯಾಬಿನೆಟ್’ನಿಂದ ಅನುಮೋದನೆ ಬೇಕಾಗಿರುವುದರಿಂದ ಎ.ಎಸ್.ಪೊನ್ನಣ್ಣ ನವರಿಂದ ನೆರವು ಕೋರಲು ಬಂದಿದ್ದರು.
ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದ ಸಾಧಕನಿಗೆ ನೆರವು ನೀಡುವುದು ರಾಜ್ಯಕ್ಕೆ ನೀಡುವ ಗೌರವವಾಗಿದೆ.
ಆದ್ದರಿಂದ ವಿಕ್ರಮ್ ಗೆ ಸಂಬಂಧಿಸಿದಂತೆ ಆಡಳಿತಾತ್ಮಕ ನೆರವು ನೀಡಲು ತಾವು ಬದ್ಧರಿದ್ದೇವೆ ಎಂದು ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.