ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಮಂಗನ ಕಾಯಿಲೆಯ ಒಂದು ಪ್ರಕರಣ ದೃಢಪಟ್ಟಿರುವ ಬೆನ್ನಿಗೇ ಆರೋಗ್ಯ ಇಲಾಖೆ ತನ್ನ ಕಣ್ಗಾವಲನ್ನು ಇನ್ನಷ್ಟು ಹೆಚ್ಚಿಸಿದೆ.
ಈ ನಡುವೆ ಕುಂದಾಪುರ ನಗರ ಹಾಗೂ ಅಜೆಕಾರು ವ್ಯಾಪ್ತಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರಿಂದ ಶನಿವಾರ ಸಂಗ್ರಹಿಸಲಾಗಿರುವ ಇನ್ನೆರಡು ಮಾದರಿಗಳ ಪರೀಕ್ಷಾ ಫಲಿತಾಂಶ ಇಂದು ಇಲಾಖೆ ಕೈಸೇರುವ ಸಾಧ್ಯತೆಯಿದ್ದು, ಈ ಭಾಗದಲ್ಲಿ ಕೂಡಾ ಇಲಾಖೆ ವ್ಯಾಪಕ ನಿಗಾ ಇರಿಸಿದೆ. ಇಲ್ಲಿನ ಪ್ರತೀ ಮನೆಗಳಿಗೂ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ಭೇಟಿ ನೀಡುತ್ತಿದ್ದು, ರೋಗ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಜೊತೆಗೆ ತಪಾಸಣೆ ಕಾರ್ಯ ಕೂಡಾ ಚುರುಕುಗೊಳಿಸಲಾಗಿದೆ.
ಈ ನಡುವೆ ಮಂಗನ ಕಾಯಿಲೆ ಸೋಂಕಿತ ರೋಗಿಯು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ. ಇನ್ನು ಬೈಂದೂರು ತಾಲೂಕಿನ ವಂಡ್ಸೆ ಪರಿಸರದಲ್ಲಿಯೂ ನಿಗಾ ಹೆಚ್ಚಿಸಲಾಗಿದೆ. ಕಾಡಂಚಿನ ಪ್ರದೇಶಗಳಲ್ಲಿ ಮಂಗಗಳ ಮೃತದೇಹಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳಿಯಾಡಳಿತ, ಆರೋಗ್ಯ ಇಲಾಖೆಯ ಗಮನಕ್ಕೆ ತರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಐ. ಗಡಾದ್ ಅವರು ನಾಗರಿಕರಿಗೆ ಸೂಚಿಸಿದ್ದಾರೆ.