ಹೊಸದಿಗಂತ ವರದಿ, ಮೈಸೂರು:
ಖದೀಮನೊಬ್ಬ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಮೈಸೂರು ತಾಲೂಕಿನ ಗೊರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಜಪೇಯಿ ಬಡಾವಣೆಯ ನಿವಾಸಿ ಕೃಷ್ಣಪ್ಪ ಎಂಬುವರ ಪತ್ನಿ ಸುಂದರಮ್ಮ ಸರ ಕಳೆದುಕೊಂಡವರು.
ಮನೆಯಿಂದ ಹೊರಗಡೆ ಬಂದ ಇವರ ಬಳಿಗೆ ಬಂದ ಖದೀಮ ವಿಳಾಸ ಕೇಳುವ ನೆಪದಲ್ಲಿ ಮಾತು ಬೆಳೆಸಿದ್ದಾನೆ. ಇಲ್ಲಿ ಹೆಚ್ಚು ಜನರು ವಾಸಿಸುವುದಿಲ್ಲ. ಹಾಗಾಗಿ ನೀವು ಚಿನ್ನದ ಸರವನ್ನು ಹೀಗೆ ಹಾಕಿಕೊಳ್ಳಬಾರದು. ಹಾಗಾಗಿ ಚಿನ್ನದ ಸರವನ್ನು ಬಿಚ್ಚಿ ಸೆರಗಿಗೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದಾನೆ. ಬಳಿಕ ನಾನೇ ಕಟ್ಟಿಕೊಡುತ್ತೇನೆ ಎಂದು ತಿಳಿಸಿ, ಕಟ್ಟಿಕೊಡುವ ನಾಟಕವಾಡಿದ್ದಾನೆ.
ಆತನ ಮಾತನ್ನು ನಂಬಿದ ಸುಂದರಮ್ಮ ಆತ ಮಾತು ಮುಗಿಸಿ ಹೋಗುತ್ತಿದ್ದಂತೆ ಮನೆಯೊಳಗೆ ಹೋಗಿ ಸೆರಗಿನ ಗಂಟನ್ನು ಬಿಚ್ಚಿ ನೋಡಿದಾಗ, ಅಲ್ಲಿ ೨ ಲಕ್ಷರೂ ಮೌಲ್ಯದ ಚಿನ್ನದ ಸರವಿರಲಿಲ್ಲ. ಮೋಸ ಹೋಗಿರುವುದು ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದಕ್ಷಿಣ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.