ಹೊಸದಿಗಂತ ವರದಿ ಶಿವಮೊಗ್ಗ :
ಬೆಳ್ಳಂಬೆಳಗ್ಗೆ ನಗರದ ಗೋಪಾಲಗೌಡ ಬಡಾವಣೆಯ ಡಿವಿಜಿ ಪಾರ್ಕ್ ನಲ್ಲಿ ಪ್ರತ್ಯಕ್ಷವಾದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿರುವ ಘಟನೆ ಬುಧವಾರ ನಡೆದಿದೆ.
ಎಂದಿನಂತೆ ನಿವಾಸಿಗಳು ಪಾರ್ಕ್‌ನಲ್ಲಿ ವಾಕ್ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಕರಡಿ ಕಂಡ ನಾಯಿಗಳು ಬೊಗಳಲಾರಂಭಿಸಿವೆ. ಇದರಿಂದ ಗಲಿಬಿಲಿಗೊಂಡ ಕರಡು ಆ ಕಡೆ ಈಕಡೆ ಓಡಿದೆ. ಬಳಿಕ ಎದುರಿಗೆ ಸಿಕ್ಕ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿತ್ತು.
ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರಡಿ ಇರುವಿಕೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿಗಳು ಹಾಗೂ ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಕರಡಿ ಇರುವಿಕೆ ಬಗ್ಗೆ ಖಾತರಿ ಮಾಡಿಕೊಂಡು ಕಾರ್ಯಾಚರಣೆ ನಡೆಸಿ, ಅರವಳಿಕೆ ನೀಡಿ (ಟ್ರ್ಯಾಕ್ಯುಲೇಶನ್)ಸೆರೆ ಹಿಡಿದಿದ್ದಾರೆ. ಬಳಿಕ ಸಿಂಹಧಾಮಕ್ಕೆ ತೆಗೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿ ತಾತ್ಕಾಲಿಕವಾಗಿ ಅಲ್ಲಿಯೇ ಇಡಲಾಗಿದೆ.