ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ (Kuldeep Singh Pathania) ಅವರು ಸ್ಪೀಕರ್ ಚೇಂಬರ್ನಲ್ಲಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಬುಧವಾರ ಅಮಾನತುಗೊಳಿಸಿದ್ದಾರೆ.
ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಮತ್ತು ಇಂದರ್ ಸಿಂಗ್ ಅಮಾನತುಗೊಂಡಿದ್ದಾರೆ.
ರಾಜ್ಯಸಭಾ ಚುನಾವಣೆಯು ಕಾಂಗ್ರೆಸ್ ಸರ್ಕಾರ ಅಲ್ಪಮತದಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ರಾಜೀನಾಮೆ ನೀಡಬೇಕು ಎಂದು ಜೈರಾಮ್ ಠಾಕೂರ್ ಒತ್ತಾಯಿಸಿದ್ದರು.
ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ಮಂಗಳವಾರ ಬಿಜೆಪಿ ಗೆದ್ದುಕೊಂಡಿದೆ. ಈ ಅನಿರೀಕ್ಷಿತ ಫಲಿತಾಂಶದಿಂದ ಕಾಂಗ್ರೆಸ್ಗೆ ಆಘಾತ ಎದುರಾಗಿದೆ. ಬಿಜೆಪಿಯು ವಿಶ್ವಾಸಮತಕ್ಕೆ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಹಿಮಾಚಲ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಅವರು ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.