ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತದಲ್ಲಿ ವಿಮಾನ ಪ್ರಯಾಣದ ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ನಾಗರಿಕ ವಿಮಾನಯಾನ ನಿಯಂತ್ರಕ ಸಿವಿಲ್ ಏರೋನಾಟಿಕ್ಸ್ ನಿರ್ದೇಶನಾಲಯ (DGCA) ಇದೀಗ ವಿಮಾನದೊಳಗೆ ಪವರ್ ಬ್ಯಾಂಕ್ ಬಳಕೆಯನ್ನು ನಿಷೇಧಿಸಿದೆ.
ಸುರಕ್ಷತೆಯ ದೃಷ್ಟಿಯಿಂದ ವಿಮಾನದಲ್ಲಿ ಪ್ರಯಾಣಿಸುವಾಗ ಫೋನ್ ಅಥವಾ ಇತರ ಗ್ಯಾಜೆಟ್‌ಗಳನ್ನು ಆಸನದ ಪವರ್ ಔಟ್‌ಗಳ ಮೂಲಕ ಚಾರ್ಜ್ ಮಾಡುವಂತಿಲ್ಲ.
ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗುವುದು ಅಥವಾ ಬೆಂಕಿ ಹಚ್ಚಿಕೊಳ್ಳುವುದು ಸೇರಿದಂತೆ ವಿಶ್ವದಾದ್ಯಂತ ನಡೆದ ಹಲವು ಘಟನೆಗಳ ನಂತರ, ಪೋನ್‍ಗಳು ಅಥವಾ ಇತರ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಡಿಜಿಸಿಎ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ಡೆಂಜರಸ್ ಗುಡ್ಸ್ ಅಡ್ವೈಸರಿ ಸರ್ಕ್ಯುಲರ್‌ನಲ್ಲಿ ಈ ವಿಚಾರ ತಿಳಿಸಿದ್ದಾರೆ. ಪವರ್ ಬ್ಯಾಂಕ್‌ಗಳು ಸೇರಿದಂತೆ ಚಾರ್ಜರ್ ಇತ್ಯಾದಿಗಳನ್ನು ಲಗೇಜ್‍ನಲ್ಲಿ ಇರಿಸುವಂತಿಲ್ಲ. ಹ್ಯಾಂಡ್‍ಬ್ಯಾಗ್‍ಗಳಲ್ಲಿ ಮಾತ್ರ ಪವರ್ ಬ್ಯಾಂಕ್ ಅನ್ನು ಕೊಂಡೊಯ್ಯಬಹುದು.
ಲಿಥಿಯಂ ಬ್ಯಾಟರಿ ಬೆಂಕಿಯು ಅಪಾಯಕಾರಿ. ಪವರ್ ಬ್ಯಾಂಕ್‌ಗಳು, ಪೋರ್ಟಬಲ್ ಚಾರ್ಜರ್‌ಗಳು ಮತ್ತು ಲಿಥಿಯಂ ಬ್ಯಾಟರಿಗಳನ್ನು ಒಳಗೊಂಡ ಇತರ ಸಾಧನಗಳು ಅಗ್ನಿ ಉಂಟು ಮಾಡುವ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಆ ಮೂಲಕ ವಿಮಾನದಲ್ಲಿಯೇ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಬ್ಯಾಟರಿಗಳು ವಿಮಾನದೊಳಗೆ ಇದ್ದರೆ ಅಪಾಯ ಇನ್ನಷ್ಟು ಹೆಚ್ಚಬಹುದು. ಓವರ್‌ಹೆಡ್ ಸ್ಟೋವೇಜ್ ಬಿನ್‌ಗಳಲ್ಲಿ ಅಥವಾ ಕ್ಯಾರಿ-ಆನ್ ಬ್ಯಾಗೇಜ್‌ನಲ್ಲಿ ಇರಿಸಲಾದ ಲಿಥಿಯಂ ಬ್ಯಾಟರಿಗಳು ಅಪಾಯಕಾರಿಯಾಗಬಹುದು. ಅದರಿಂದ ಉಂಟಾಗುವ ಹೊಗೆ ಅಥವಾ ಬೆಂಕಿ ಪತ್ತೆ ಮಾಡಲು ತಡವಾಗಬಹುದು. ಇದು ವಿಮಾನ ಸುರಕ್ಷತೆಗೆ ಸಂಭಾವ್ಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಿಜಿಸಿಎ ಹೇಳಿದೆ.
ಹೆಚ್ಚಿನ ತಾಪಮಾನ, ಓವರ್ ಚಾರ್ಜಿಂಗ್, ಒತ್ತಡ, ಕಳಪೆ ಉತ್ಪಾದನಾ ಗುಣಮಟ್ಟ, ಹಳೆಯ ಬ್ಯಾಟರಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಬಹುದು. ಲಿಥಿಯಂ ಬ್ಯಾಟರಿಯಲ್ಲಿ ಬೆಂಕಿ ಉಂಟಾಗುವುದೇ ಗಮನಕ್ಕೆ ಬರುವುದಿಲ್ಲ. ಹೀಗಾಗಿ ಇದು ಬಹಳ ಅಪಾಯಕಾರಿ.ವಿಮಾನಯಾನ ಸಂಸ್ಥೆಗಳು ಹೊಸ ಸುರಕ್ಷತಾ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ವಿಮಾನಯಾನ ಪ್ರಕಟಣೆಗಳ ಮೂಲಕ ತಿಳಿಸಲು ನಿರ್ದೇಶಿಸಲಾಗಿದೆ. ಯಾವುದೇ ಉಪಕರಣವು ಶಾಖ, ಹೊಗೆ ಅಥವಾ ಅಸಾಮಾನ್ಯ ವಾಸನೆಯನ್ನು ಹೊರಸೂಸಿದರೆ ಪ್ರಯಾಣಿಕರು ತಕ್ಷಣವೇ ಕ್ಯಾಬಿನ್ ಸಿಬ್ಬಂದಿಗೆ ತಿಳಿಸಬೇಕು ಎಂದು ತಿಳಿಸಲಾಗಿದೆ.
ವಿಮಾನ ಪ್ರಯಾಣದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ಬ್ಯಾಟರಿ ಸಂಬಂಧಿತ ಬೆಂಕಿಯನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳು ಕಠಿಣ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಡಿಜಿಸಿಎ ಹೇಳಿದೆ.

