ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಬರಗಾಲದ ಬೇಗೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ-ಮೈಸೂರು ಭಗದ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುತ್ತಿರುವ ಬೆನ್ನಲ್ಲೇ, ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಅಣೆಕಟ್ಟೆಗೆ ಕನ್ನ ಹಾಕಿ ಮೋಟಾರ್ ಅಳವಡಿಸಿಕೊಂಡು ಫಾರ್ಮ್ ಹೌಸ್‌ಗೆ ನೀರು ಸರಬರಾಜು ಮಾಡಿಕೊಳ್ಳುತ್ತಿರುವುದು ತಾಲೂಕಿನ ಕೆಆರ್‌ಎಸ್ ಕನ್ನಂಬಾಡಿ ಅಣೆಕಟ್ಟೆಗೆ ಬಳಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಭಾವಿ ವ್ಯಕ್ತಿಗಳು ತಮ್ಮ ಫಾರ್ಮ್ ಹೌಸ್‌ಗೆ ಡ್ಯಾಂನಿಂದಲೇ ಕಳ್ಳತನದ ಮೂಲಕ ನೀರು ಪೂರೈಕೆ ಮಡಿಕೊಳ್ಳುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಯ ಹಿನ್ನಿರಿಗೆ ಹೊಂದಿಕೊಂಡಂತಿರುವ ಎರಡು ಫಾರ್ಮ್ ಹೌಸ್ ನ ನೀರು ಸರಬರಾಜಿಗೆ ಸುಮಾರು 200 ರಿಂದ 300 ಮೀಟರ್ ಪೈಪ್ ಅಳವಡಿಸಿಕೊಂಡು ನೀರಿಗೆ ಕನ್ನ ಹಾಕಿರುವ ಸಂಗತಿ ಬಯಲಾಗಿದೆ. ಅಣೆಕಟ್ಟೆ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ ನಡೆದಿದ್ದು, ಎಲ್ಲೆಡೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದರೂ, ಕದ್ದು ಮುಚ್ಚಿ ಫಾರ್ಮ್ ಹೌಸ್‌ಗೆ ಪ್ರಭಾವಿಗಳು ನೀರು ಪೂರೈಕೆ ಮಾಡಿಕೊಂಡಿರುವುದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆದಿರುವ ಪ್ರಭಾವಿಗಳಿಗೆ ಅಧಿಕಾರಿಗಳ ಕುಮ್ಮಕ್ಕು ಇರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಸಾಕಷ್ಟು ಸಲ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸಲಿಲ್ಲ ಎಂಬ ಅರೋಪಗಳು ಕೇಳಿ ಬರುತ್ತಿದ್ದು, ಫಾರ್ಮ್ ಹೌಸ್‌ನ ಮಾಲೀಕರ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ಕಣ್ಮುಚ್ಚಿ ಕುಳಿತದ್ದಾರೆಂದು ಆರೋಪಗಳು ಸಹ ಕೇಳಿ ಬರುತ್ತಿವೆ. ಇದೀಗ ಮಾದ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ನೀರಾವರಿ ನಿಗಮದ ಅಧಿಕರಿಗಳು, ಅಕ್ರಮವಾಗಿ ಅಳವಡಿಸಿದ್ದ ಮೋಟಾರು ಹಾಗೂ ಪೈಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಣೆಕಟ್ಟೆಗೆ ಅಕ್ರಮವಾಗಿ ಮೋಟಾರ್ ಅಳವಡಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.