ಹೊಸದಿಗಂತ ವರದಿ,ಚಿತ್ರದುರ್ಗ :
ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಗೂ ಕಾಂಗ್ರೇಸ್ ಸರ್ಕಾರ ಎಷ್ಟೆಷ್ಟು ಅನುದಾನ ನೀಡಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆಗೆ ಬರಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಬಹಿರಂಗ ಸವಾಲು ಹಾಕಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುದಾನ ಪಡೆಯುವಲ್ಲಿ ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎನ್ನುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೇಸ್ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದರು.
ಕಳೆದ ವರ್ಷದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೊಷಣೆ ಮಾಡಿದ್ದ ೨೭೦೦ ಕೋಟಿ ಅನುದಾನದಲ್ಲಿ ಕೇವಲ ೧೪೦೦ ಕೋಟಿ ಹಣ ಮಾತ್ರ ನೀಡಿದ್ದಾರೆ. ಇನ್ನು ಈ ವರ್ಷದ ಬಜೆಟ್‌ನಲ್ಲಿ ಒಂದು ನಯಾಪೈಸೆ ಅನುದಾನ ನೀಡಿಲ್ಲ. ಮೆಡಿಕಲ್ ಕಾಲೇಜ್‌ಗೆ ಕೇವಲ ೩೦ ಕೋಟಿ ಹಣ ನೀಡಲಾಗಿದೆ. ಎಸ್.ಸಿ., ಎಸ್.ಟಿ.ಗೆ ಮೀಸಲಿರಿಸಿದ್ದ ೧೧ ಸಾವಿರ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ಯಾವುದೇ ಅಭಿವೃದ್ಧೀ ಕುರಿತು ಮುಖ್ಯಮಂತ್ರಿ ಮಾತನಾಡುತ್ತಿಲ್ಲ. ಇಂದಿನ ಕಾಂಗ್ರೇಸ್ ಸರ್ಕಾರ ಜಿಲ್ಲೆಯ ಪಾಲುಗೆ ಶಾಪವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.
೨೦೧೩ ರಿಂದ ಈಚೆಗೆ ಪ್ರತಿ ಶಾಸಕರಿಗೆ ಕ್ಷೇತ್ರ ಅಭಿವೃದ್ಧಿಗೆ ವಾರ್ಷಿಕ ೧ ಕೋಟಿ ರೂ. ಅನುದಾಣ ನೀಡಬೇಕಿದೆ. ಆದರೆ ಈಗಿನ ಕಾಂಗ್ರೇಸ್ ಸರ್ಕಾರ ಕೇವಲ ೩೦ ಲಕ್ಷ ರೂ. ಅನುದಾನ ನೀಡಿದೆ. ಶಾಸಕರು ಈ ಹಣವನ್ನು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂದು ತಿಳಿಯುತ್ತಿಲ್ಲ. ನೀರಾವರಿ ಹೋರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಒಬ್ಬ ಪ್ರತಿನಿಧಿಯನ್ನು ನೇಮಿಸಿದೆ. ಅವರನ್ನು ಸದಾ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಆರೋಪಿಸಿದರು.
ಬರ ನಿರ್ವಹಣೆ ಕುರಿತಂತೆ ಯಾವುದೇ ಅನುದಾನ ನೀಡಿಲ್ಲ. ರಾಜ್ಯದಲ್ಲಿ ೬೯೨ ಜನ ರೈತರು ಆತ್ಮಹತ್ಯೆಗೆ ಈಡಾಗಿದ್ದಾರೆ. ಈವರೆಗೆ ಯಾವ ಮಂತ್ರಿಯೂ ಮೃತ ರೈತರ ಮನೆಗಳಿಗೆ ಹೋಗಿಲ್ಲ. ಕನಿಷ್ಠ ಅಧಿಕಾರಿಗಳೂ ಸಹ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಪಕ್ಷದ ಕಾರ್ಯಕ್ರಮಗಳನ್ನು ಮಾತ್ರ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ದೇಶ ವಿರೋಧಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಲು ಸಾಕ್ಷಿ ಕೇಳುತ್ತಿದೆ ಎಂದು ವಾಗ್ದಾಳೆ ನಡೆಸಿದರು.
ಬರದ ಹಿನ್ನೆಲೆಯಲ್ಲಿ ರಾಝ್ಯದ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ. ಆದರೆ ಅವರನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ಪರಿಹಾರೋಪಾಯಗಳನ್ನು ಕೈಗೊಂಡಿಲ್ಲ. ಬಯಲುಸೀಮೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಅನುದಾನ ನೀಡಿಲ್ಲ. ಕೇವಲ ಪೊಳ್ಳು ಭರವಸೆ ನೀಡಲಾಗುತ್ತಿದೆ. ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿಗೆ ಹಣ ನೀಡಬೇಕು. ತಪ್ಪಿದಲ್ಲಿ ಜಿಲ್ಲೆಯಲ್ಲಿನ ರೈತರಿಗೆ ಜಾಗೃತಿ ಮೂಡಿಸಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹಾಸನದ ಮಾಜಿ ಶಾಸಕ ಪ್ರೀತಂಗೌಡ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಪಕ್ಷದ ವರಿಷ್ಟರು ಪ್ರತಿ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಘಟನಾತ್ಮಕ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಮಾರ್ಚ್ ೧೦ ರಂದು ದಾವಣಗೆರೆ, ಚಿತ್ರದುರ್ಗ, ತುಮಕೂರು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ೨೮ ಸ್ಥಾನ ಗೆಲ್ಲುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಭ್ರಷ್ಟ ಆಡಳಿತ ನಡೆಸುತ್ತಿರುವ ಕಾಂಗ್ರೇಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಸಂಪತ್ ಕುಮಾರ್, ಬಾಳೆಕಾಯಿ ರಾಮದಾಸ್, ನಗರದ ಯುವ ಮೋರ್ಚ ಅಧ್ಯಕ್ಷ ರಾಮು, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಚಲವಾದಿ ಹಾಜರಿದ್ದರು.