ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಟೀಟ್ ಮಾಡಿರುವ ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ, ಸುಲಿಗೆ, ಗೂಂಡಾಗಿರಿ, ಮಹಿಳಾ ದೌರ್ಜನ್ಯಗಳು ಸರಣೀ ರೂಪದಲ್ಲಿ ವರದಿಯಾಗುತ್ತಲೇ ಇವೆ, ದೇಶ ಕಂಟಕ ಶಕ್ತಿಗಳು ವಿಧಾನ ಸೌಧದೊಳಗೇ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಜನನಿಬಿಡ ಹೊಟೇಲ್ ಪ್ರವೇಶಿಸಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಗಾಯಗೊಳಿಸಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದೆ ಎಂದು ಟೀಕಿಸಿದ್ದಾರೆ.
ಸುಭದ್ರ ಕರ್ನಾಟಕಕ್ಕೆ ಗಂಡಾಂತರದ ಆತಂಕ ತರುವ ಚಟುವಟಿಕೆಗಳನ್ನು ಬಗ್ಗುಬಡಿಯುವಲ್ಲಿ ಮೀನಾಮೇಷ ಎಣಿಸುತ್ತಾ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಲೆಕ್ಕಾಚಾರದ ಹೆಜ್ಜೆಗಳ ದಾರಿ ಬದಲಿಸಿಕೊಳ್ಳದೇ ಹೋದರೆ ಅಧಿಕಾರದಿಂದ ಕೆಳಗಿಳಿಸಿ ವಿಧಾನ ಸೌಧದಿಂದ ಹೊರ ಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
‘ಬಿಜೆಪಿ ಇಂತ ಘಟನೆಗಳಲ್ಲಿ ರಾಜಕಾರಣ ಮಾಡಲ್ಲ. ಇದು ಜನರ ಸುರಕ್ಷತಾ ವಿಚಾರ. ನಿಮ್ಮ ಅಲ್ಪ ಸಂಖ್ಯಾತರ ತುಷ್ಟೀಕರಣ ನೀತಿ ಈ ಪರಿಸ್ಥಿತಿಗೆ ತಂದಿದೆ. ಮುಖ್ಯಮಂತ್ರಿ ಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಪದೇ ಪದೇ ಬಾಂಬ್ ಇಟ್ಟಿರುವುದಾಗಿ ಬೆದರಿಕೆಗಳು ಬರುತ್ತಿದ್ದವು. ಎರಡುಮೂರು ಬಾರಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಬಂದಿದ್ದವು. ಈಗ ಬಾಂಬ್ ಸ್ಪೋಟ ಆಗಿದೆ. ಬಾಂಬ್ ಬೆದರಿಕೆ ಇಮೇಲ್ ಬಂದಾಗ ಡಿಕೆಶಿ ಮಾತನಾಡಿದ್ದರು. ಹೀಗೆ ಬೆದರಿಕೆ ಹಾಕಿ ಹಾಕಿ ಒಂದಿನ ಬ್ಲಾಸ್ಟ್ ಮಾಡ್ತಾರೆ ಅಂದಿದ್ದರು. ನಾವು ಬೆದರಿಕೆ ಮೇಲ್ ನ ನೆಗ್ಲೆಕ್ಟ್ ಮಾಡಲ್ಲ ಅಂದಿದ್ದರು’ ಎಂದು ಹೇಳಿದ್ದಾರೆ.
ತಾಕತ್ ಇದ್ರೆ ತಕ್ಷಣ ಎನ್ ಐಎಗೆ ವಹಿಸಿ. ಪ್ರತಿ ವಿಚಾರದಲ್ಲಿ ಕೂಡಾ ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡಬೇಡಿ. ಇದು ಇತರ ಅಲ್ಪ ಸಂಖ್ಯಾತರಿಗೂ ಕೆಟ್ಟ ಹೆಸರು ಬರುತ್ತದೆ. ಪದೇ ಪದೇ ಡಿಕೆಶಿ ಇದೇ ರೀತಿ ಹೇಳಿಕೆ ಕೊಡುತ್ತಿದ್ದರೆ, ದೇಶದ್ರೋಹಿ ಗಳ ಲಿಸ್ಟ್ ನಲ್ಲಿ ಡಿಕೆಶಿ ಹೆಸರನ್ನೂ ಸೇರಿಸಬೇಕಾಗುತ್ತದೆ. ನಿಮ್ಮ ಈ ನಡವಳಿಕೆಯಿಂದ ಪದೇ ಪದೇ ಈ ರೀತಿಯ ಘಟನೆಗಳು ಆಗುತ್ತಿವೆ ಎಂದು ಹೇಳಿದ್ದಾರೆ.