ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಓಕೆ, ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ: ಅಶೋಕ್ ಚಾಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನೀವು ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್ (R. Ashoka) ಚಾಟಿ ಬೀಸಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameswaram Cafe Blast) ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ರೆಕ್ಕೆಪುಕ್ಕ ಬಂದಿದೆ. ಶರ್ಟ್ ಗುಂಡಿ ಬಿಚ್ಚಿಕೊಂಡು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ದೇಶದ ಕಾನೂನು ಇವರಿಗೆ ಅನ್ವಯವಾಗಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆ ಆದಾಗಲೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸರಣಿ ಕೊಲೆಗಳಾದಾಗಲೂ ಸರ್ಕಾರ ಕ್ರಮಕೈಗೊಳ್ಳಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು. ಆದರೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕುಕ್ಕರ್ ಬ್ಲಾಸ್ ಆರೋಪಿಯನ್ನು ಬ್ರದರ್ ಎಂದು ಡಿಕೆ ಶಿವಕುಮಾರ್​ ಹೇಳಿದ್ದರು. ರಾಮೇಶ್ವರಂ ಕೆಫೆ ಆರೋಪಿಯನ್ನು ಅಂಕಲ್ ಎಂದು ಹೇಳುತ್ತಾರೇನೋ? ಇವರನ್ನು ಅಂಕಲ್ ಅಂದರೆ ನಾವೆಲ್ಲರೂ ಏನಾಗಬೇಕು ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ದೇಶದ್ರೋಹಿಗಳನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುತ್ತೇವೆ. ಸಮಾಜಘಾತುಕರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಆದಾಯ ಕಡಿಮೆ ಆಗಬೇಕು. ಬೆಂಗಳೂರಿಗೆ ಕಟ್ಟ ಹೆಸರು ಬರಬೇಕು ಅಂತ ಭಯೋತ್ಪಾದನಾ ಸಂಘಟನೆ ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಭಯೋತ್ಪಾದನಾ ಕೃತ್ಯ ಮಾಡುವವರಿಗೆ ಕಾಂಗ್ರೆಸ್ ಅವಕಾಶ ಮಾಡಿ ಕೊಟ್ಟಿದೆ. ರಾಜ್ಯದ ಭದ್ರತೆ ವಿಚಾರ ಇದು. ಇದರಲ್ಲಿ ರಾಜಕಾರಣ ಬೇಡ. ಓಟಿಗಾಗಿ ಇದನ್ನ ನೋಡಬೇಡಿ. ಆಡಳಿತ ಪಕ್ಷವಾಗಿ ನೀವು ನಡೆದುಕೊಳ್ಳಿ, ವಿಪಕ್ಣವಾಗಿ ನಾವು ನಡೆದುಕೊಳ್ಳುತ್ತೇವೆ. ಜವಾಬ್ದಾರಿಯಿಂದ ಆಡಳಿತ ಪಕ್ಷ ನಡೆದುಕೊಳ್ಳಬೇಕು. ತಕ್ಷಣ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ರಾಜ್ಯದಲ್ಲಿ ಇನ್ನೂ ಕೆಲವೆಡೆ ಘಟನೆ ನಡೆಯಬಹುದು. ಕಾನೂನು ಸುವ್ಯವಸ್ಥೆ, ಇಂಟೆಲಿಜೆನ್ಸ್, ಸರ್ಕಾರ‌ ಬದುಕಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!