ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಇಂಡಿಯಾ ಕೂಟದ ನಾಯಕರು ಗಾಂಧೀಜಿಯ ಮೂರು ಮಂಗಗಳಿದ್ದಂತೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಹಾಗೂ ಜನಸಾಮಾನ್ಯರ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆ ಪ್ರಧಾನಿಮೋದಿ ಅವರು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
ಹೂಗ್ಲಿ ಜಿಲ್ಲೆಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ‘ಸಂದೇಶ್‌ಖಾಲಿ ಘಟನೆ ಬಗ್ಗೆ ಇಂಡಿಯಾ ಕೂಟದ ನಾಯಕರು ಮೌನವಾಗಿದ್ದಾರೆ. ಅವರು ಗಾಂಧೀಜಿಯ ಮೂರು ಮಂಗಗಳಿದ್ದಂತೆ. ಸಂದೇಶ್‌ಖಾಲಿಯ ಬಗ್ಗೆ ಕೇಳಿದಾಗ ಕಾಂಗ್ರೆಸ್ ಅಧ್ಯಕ್ಷರು ‘ಬಂಗಾಳದಲ್ಲಿ ಇದೆಲ್ಲ ಆಗುತ್ತಿರುತ್ತದೆ ಬಿಟ್ಹಾಕಿ’ ಎಂದು ಹೇಳಿದರಂತೆ’ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರೆ ಬಂಗಾಳ ಸರ್ಕಾರ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕುಳಿತಿದೆ. ತೃಣಮೂಲ ಕಾಂಗ್ರೆಸ್‌ನ ಕೃತ್ಯಗಳನ್ನು ನೋಡಿ ಇಡೀ ದೇಶದ ಜನರು ಕ್ರುದ್ಧರಾಗಿದ್ದಾರೆ. ಮಾ, ಮಾಟಿ, ಮಾನುಷ್ ಎಂದು ಜಪ ಮಾಡುವ ಟಿಎಂಸಿ ಪಕ್ಷ ಸಂದೇಶ್‌ಖಾಲಿಯ ಅಕ್ಕತಂಗಿಯರಿಗೆ ಏನು ಮಾಡಿದೆ ನೋಡಿ. ಇದು ನಾಚಿಕೆಗೇಡಿನ ಸಂಗತಿ’ ಎಂದು ವಾಗ್ದಾಳಿ ನಡೆಸಿದರು.