ಹೊಸ ದಿಗಂತ ಮಂಗಳೂರು:
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಎಂಬಲ್ಲಿ ಆಗಂತುಕರ ತಂಡವೊಂದು ಮನೆಗೆ ನುಗ್ಗಿ ಯುವಕನೋರ್ವನನ್ನು ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಕಳೆದ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿ ಕೃಷ್ಣ (36) ಕೊಲೆಯಾದವರು. ಇವರು ಹನೆಹಳ್ಳಿಯಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದು, ಮಣಿಪಾಲದಲ್ಲಿ ಉದ್ಯೋಗದಲ್ಲಿದ್ದರು ಎಂದು ಪ್ರಾಥಮಿಕ ಮಾಹಿತಿಗಳಲ್ಲಿ ತಿಳಿದುಬಂದಿದೆ. ಶನಿವಾರ ರಾತ್ರಿ ಮನೆಗೆ ಬಂದ ಕೃಷ್ಣ, ಊಟ ಮಾಡುತ್ತಿದ್ದ ಸಂದರ್ಭ ಮನೆಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಪಟಾಕಿ ಸದ್ದು ಎಂದುಕೊಂಡೆವು
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆಘಾತಕ್ಕೊಳಗಾಗಿರುವ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ 9.30ರ ಸುಮಾರಿಗೆ ಸದ್ದು ಕೇಳಿಸಿತ್ತು. ನಾವು ಮೊದಲು ಪಟಾಕಿಯ ಶಬ್ದವೆಂದು ಸುಮ್ಮನಾದೆವು ಎಂದು ಹೇಳಿಕೆ ನೀಡಿದ್ದಾರೆ. ನೆರೆಹೊರೆ ಅವರು ತಿಳಿಸಿದ್ದಾರೆ. ಕೃಷ್ಣ ಕೊಲೆಯಾಗಿರುವುದು ಇಂದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ.