ದೇಶ ವಿರೋಧಿ ಹೇಳಿಕೆಯನ್ನು ಯಾರೇ ನೀಡಿದರೂ ಸಹಿಸಲ್ಲ: ಪ್ರಣವಾನಂದ ಶ್ರೀ

ಹೊಸದಿಗಂತ ವರದಿ, ಕಾರವಾರ:

ನಮ್ಮ ದೇಶದಲ್ಲಿ ಹುಟ್ಟಿ, ಬೆಳೆದು ದೇಶದ ಅನ್ನ ತಿಂದು ದೇಶ ವಿರೋಧಿ ಮನೋಭಾವ ತೋರುವುದು ತಾಯಿಗೆ ದ್ರೋಹ ಬಗೆದಂತೆ ದೇಶ ವಿರೋಧಿ ಹೇಳಿಕೆಗಳನ್ನು ಯಾರೇ ನೀಡಿದರೂ ನಾವು ಎಂದೂ ಸಹಿಸುವುದಿಲ್ಲ ಎಂದು ಈಡಿಗ ಸಮುದಾಯದ ಗುರುಗಳು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಶ್ರೀಗಳು ಹೇಳಿದರು.

ನಗರದಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆ ಖಂಡನೀಯವಾಗಿದ್ದು ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೇ ಸೂಕ್ತ ತನಿಖೆ ನಡೆಸಬೇಕು ಎಂದರು.

ಈಡಿಗ ಸಮುದಾಯದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಬಲಿಸುತ್ತೇವೆ ಆದರೆ ಅವರ ರಾಜಕೀಯ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸ್ವಾಮಿ ಪ್ರಣವಾನಂದರು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ಧರಾಮಯ್ಯ ಅವರು ಮಂಡಿಸಿದ ಎರಡೂ ಬಜೆಟ್ ಗಳಲ್ಲಿ ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಅನುದಾನ ನೀಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ ಅವರು ಸರ್ಕಾರ ಕೂಡಲೇ ನಾರಾಯಣ ಗುರು ನಿಗಮಕ್ಕೆ 500ಕೋಟಿ ಅನುದಾನ ಒದಗಿಸಬೇಕು ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಪ್ರತಿಮೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಬೇಡಿಕೆ ಈಡೇರದಿದ್ದರೆ ಮಾರ್ಚ್ 20 ರ ನಂತರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಡಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಲಾಗಿತ್ತು
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಡಿಗ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ನಾಮಧಾರಿ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಡಾ.ರಾಜಕುಮಾರ ಅವರು ರಾಜಕೀಯದಿಂದ ಸದಾ ದೂರ ಇದ್ದರು ಅವರು ಮನಸ್ಸು ಮಾಡಿದರೆ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು ಅವರಂತೆ ಅವರ ಕುಟುಂಬದ ಸದಸ್ಯರೂ ರಾಜಕೀಯದಿಂದ ದೂರ ಇರುವುದು ಸೂಕ್ತ ಎಂದು ಗೀತಾ ಶಿವರಾಜಕುಮಾರ್ ಅವರ ಚುನಾವಣೆ ಸ್ಪರ್ಧೆಯ ಕುರಿತಂತೆ ಸ್ವಾಮಿ ಪ್ರಣವಾನಂದರು ಪ್ರತಿಕ್ರಿಯಿಸಿದರು.

ರಾಷ್ಟ್ರೀಯ ಈಡಿಗ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ನಾಯ್ಕ, ಕಾರ್ಯದರ್ಶಿ ಉಲ್ಲಾಸ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!