ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರೆಂದರೆ ಯೋಚನೆಗೆ ಬರುವುದು ಅವರ ಕೆಲಸದ ಶೈಲಿ, ಕ್ರಿಮಿನಲ್ಗಳ ಪತ್ತೆ. ಆದ್ರೆ ಅದನ್ನೂ ಮೀರಿ ಪೊಲೀಸರಿಂದ ಸಾಕಷ್ಟು ಮಾನವೀಯ ಕಾರ್ಯಗಳು ನಡೆಯುತ್ತಿರುತ್ತವೆ.
ಅದಕ್ಕೆ ಉದಾಹರಣೆ ಅಂದರೆ ಉತ್ತರಪ್ರದೇಶದ ಪೊಲೀಸರು ಅಪರಾಧಿಯೊಬ್ಬನ ಮಗಳ ಮದುವೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಹೌದು, ಕಾನ್ಸ್ಟೆಬಲ್ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಮೇಶ್ ಎಂಬಾತನನ್ನು ಉ.ಪ್ರ. ಪೊಲೀಸರು ನ್ಕೌಂಟರ್ ಮಾಡಿದ್ದರು. ಇದೀಗ ಜಾಲೌನ್ನಲ್ಲಿ (Jalaun, Uttar Pradesh) ಆ ವ್ಯಕ್ತಿಯ ಹಿರಿಯ ಮಗಳ ಮದುವೆಯನ್ನು ಪೊಲೀಸರೇ ನಿಂತು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮೇ 10, 2023 ರಂದು, ಉರೈ ಕೊತ್ವಾಲಿ ಪ್ರದೇಶದ ಹೆದ್ದಾರಿ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಭೇದಜಿತ್ ಸಿಂಗ್ ಅವರನ್ನು ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ನಾಲ್ಕು ದಿನಗಳ ನಂತರ ಪೊಲೀಸರು ಪ್ರಮುಖ ಆರೋಪಿ ರಮೇಶ್ ರಾಯಕ್ವಾರ್ ಮತ್ತು ಕಲ್ಲು ಅಹಿರ್ವಾರ್ ಅವರನ್ನು ಎನ್ಕೌಂಟರ್ನಲ್ಲಿ ಕೊಂದಿದ್ದಾರೆ. ಇದರ ನಂತರ, ಪಾತಕಿ ರಮೇಶ್ ರಾಯಕ್ವಾರ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ಪಾಲನೆ ಮತ್ತು ಮದುವೆಯ ಜವಾಬ್ದಾರಿಯನ್ನು ಜಲೌನ್ ಪೊಲೀಸರೇ ವಹಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ರಮೇಶ್ ರಾಯಕ್ವಾರ್ ಅವರ ಹಿರಿಯ ಮಗಳು ಶಿವಾನಿ ರಾಯ್ಳ ಮದುವೆಯನ್ನು ಪೊಲೀಸರು ಅದ್ಧೂರಿಯಾಗಿ ನೆರವೇರಿಸಿದರು. ಝಾನ್ಸಿ ಜಿಲ್ಲೆಯ ಮಾಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗ್ರೌರಾ ಗ್ರಾಮದ ನಿವಾಸಿ ಮಲ್ಖಾನ್ ಅವರ ಮಗ ಮೋನು ರಾಯಕ್ವಾರ್ ಅವರನ್ನು ಶಿವಾನಿ ರಾಯ್ ವರಿಸಿದ್ದಾಳೆ. ಈ ಸಂದರ್ಭದಲ್ಲಿ, ಪಾತಕಿ ರಮೇಶ್ನ ಎನ್ಕೌಂಟರ್ ಮಾಡಿದ ತಂಡದಲ್ಲಿದ್ದ ಸಿಒ ಗಿರ್ಜಾ ಶಂಕರ್ ತ್ರಿಪಾಠಿ, ಕೊತ್ವಾಲ್ ಶಿವಕುಮಾರ್ ರಾಥೋಡ್, ಕಾನ್ಸ್ಟೆಬಲ್ ಅಮಿತ್ ದುಬೆ ಹಾಗು ಇತರ ಸದಸ್ಯರು ಹಾಜರಿದ್ದರು. ವಿ
ಸಂಪ್ರದಾಯದ ಪ್ರಕಾರ, ಪೊಲೀಸರು ವರನ ಕಡೆಯವರಿಗೆ ಮೋಟಾರ್ ಸೈಕಲ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿವಿ, ಕೂಲರ್, ಬೀರು, ಸೋಫಾ, ಬೆಡ್, ಬೀರು, ಗ್ಯಾಸ್ ಸ್ಟೌ, 51 ಪಾತ್ರೆಗಳು, ಮೊಬೈಲ್ ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪೊಲೀಸರ ಈ ಔದಾರ್ಯ ಮತ್ತು ಮಾನವೀಯತೆಯು ರಮೇಶ್ ಕುಟುಂಬದವರಿಗೆ ಖುಷಿ ತಂದಿದೆ. ತನ್ನ ತಂದೆ ಮಾಡಿದ ತಪ್ಪಿಗೆ ಅವರಿಗೆ ಶಿಕ್ಷೆಯಾಗಿದೆ. ತಂದೆಯ ಅನುಪಸ್ಥಿತಿ ನಮಗೆ ಕಾಡದಂತೆ ಪೊಲೀಸರು ಎಲ್ಲವನ್ನೂ ವಹಿಸಿ ಈ ಮದುವೆ ಮಾಡಿಸಿದ್ದಾರೆ. ಅಪ್ಪ ಇಲ್ಲ ಎಂದು ಯೋಚನೆ ಬರದಂತೆ ನೋಡಿಕೊಂಡಿದ್ದಾರೆ ಎಂದು ರಮೇಶ್ನ ಪತ್ನಿ ತಾರಾ ಮತ್ತು ಎರಡನೆ ಮಗಳು ಶಿವಾಂಗಿ ರಾಯ್ ಹೇಳಿದ್ದಾರೆ.