ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಲೇಸ್ಟೋರ್ನಲ್ಲಿ ಡೀಲಿಸ್ಟ್ ಮಾಡಲಾಗಿದ್ದ ಭಾರತೀಯ ಆ್ಯಪ್ಗಳನ್ನು ಮತ್ತೆ ರೀಸ್ಟೋರ್ ಮಾಡಲು ಗೂಗಲ್ ಒಪ್ಪಿಕೊಂಡಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ (Union minister Ashwini Vaishnaw) ಹೇಳಿದ್ದಾರೆ.
ಗೂಗಲ್ ಮತ್ತು ಆ್ಯಪ್ ಕಂಪನಿಗಳ ನಡುವಿನ ಪೇಮೆಂಟ್ ವ್ಯಾಜ್ಯಕ್ಕೆ ಪರಿಹಾರ ಹುಡುಕುತ್ತಿರುವುದಾಗಿ ಹೇಳಿದ್ದಾರೆ.
ಸೋಮವಾರ ಗೂಗಲ್ ಮತ್ತು ಭಾರತೀಯ ಸ್ಟಾರ್ಟಪ್ ಕಂಪನಿಗಳ ಪ್ರತಿನಿಧಿಗಳು ಕೇಂದ್ರ ಸಚಿವರು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದ್ದು, ಮಾತುಕತೆ ಸಕ್ಸಸ್ ಆಗಿದೆ.
‘ಗೂಗಲ್ ಮತ್ತು ಸ್ಟಾರ್ಟಪ್ ಸಮುದಾಯ, ಎರಡೂ ನಮ್ಮನ್ನು ಭೇಟಿ ಮಾಡಿವೆ. ರಚನಾತ್ಮಕವೆನಿಸುವ ಚರ್ಚೆಗಳು ನಡೆದವು. ಶುಕ್ರವಾರ ಬೆಳಗ್ಗೆ ಇದ್ದ ರೀತಿಯಲ್ಲಿ ಎಲ್ಲಾ ಆ್ಯಪ್ಗಳನ್ನು ಲಿಸ್ಟ್ನಲ್ಲಿ ಇಡಲು ಗೂಗಲ್ ಒಪ್ಪಿಕೊಂಡಿದೆ’ ಎಂದು ಕೇಂದ್ರ ಸಚಿವರು ಹೇಳಿದರು.
ನಮ್ಮ ತಂತ್ರಜ್ಞಾನ ಅಭಿವೃದ್ದಿ ಕಾರ್ಯಗಳಿಗೆ ಗೂಗಲ್ ಬೆಂಬಲ ಸಿಗುತ್ತಾ ಬಂದಿದೆ. ಮುಂಬರುವ ತಿಂಗಳಲ್ಲಿ ಸ್ಟಾರ್ಟಪ್ ಕಂಪನಿಗಳು ಮತ್ತು ಗೂಗಲ್ ದೀರ್ಘಕಾಲದ ನಿರ್ಣಯಕ್ಕೆ ಬರಬಹುದೆಂದು ಭಾವಿಸದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಭಾರತ್ ಮ್ಯಾಟ್ರಿಮೊನಿ, ಇನ್ಫೋ ಎಡ್ಜ್, ಶಾದಿ ಡಾಟ್ ಕಾಮ್, ಕುಕು ಎಫ್ಎಂ ಮೊದಲಾದ ಕಂಪನಿಗಳಿಗೆ ಸೇರಿದ ನೂರಕ್ಕೂ ಹೆಚ್ಚು ಆ್ಯಪ್ಗಳನ್ನು ಮಾರ್ಚ್ 1ರಂದು ಗೂಗಲ್ ತನ್ನ ಪ್ಲೇಸ್ಟೋರ್ನಿಂದ ಡೀಲಿಸ್ಟ್ ಮಾಡಿತ್ತು. ಆ್ಯಪ್ ಬಿಲ್ಲಿಂಗ್ ನಿಯಮಗಳಿಗೆ ಈ ಕಂಪನಿಗಳು ಬದ್ಧವಾಗಿಲ್ಲ ಎಂಬುದು ಗೂಗಲ್ನ ಪ್ರಮುಖ ಆರೋಪವಾಗಿದೆ.