ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಮುಕ್ತವಾಗಬೇಕು: ಅಧ್ಯಕ್ಷ ಮುಯಿಜು

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಕಾಲ್ತೆಗೆಯಬೇಕು ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಮತ್ತೆ ತಾಕೀತು ಮಾಡಿದ್ದಾರೆ.

ಬಾ ಅತೋಲ್ (Ba Atoll) ಎಂಬಲ್ಲಿ ಸಾರ್ವಜನಿಕ ಸಮಾವೇಶದ ವೇಳೆ ಮುಯಿಜು ಅವರ ಭಾರತ ವಿರೋಧಿ ಮಾತುಗಳು ಕೇಳಿಬಂದವು. ಮೇ 10ರ ನಂತರ ಯಾವ ಭಾರತೀಯ ಮಿಲಿಟರಿ ಸಿಬ್ಬಂದಿಯೂ ಮಾಲ್ಡೀವ್ಸ್​ನಲ್ಲಿ ಇರುವುದಿಲ್ಲ. ನಾಗರಿಕ ಪೋಷಾಕಿನಲ್ಲಿರುವವರೂ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಮೊಹಮ್ಮದ್ ಮುಯಿಜು ಎಚ್ಚರಿಕೆ ನೀಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಭಾರತದ ಮಿಲಿಟರಿ ವತಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಒಂದು ಏರ್​ಕ್ರಾಫ್ಟ್​ನ ನಿರ್ವಹಣೆ ಆಗುತ್ತಿದೆ. ಒಟ್ಟು 88 ಮಂದಿ ಸಿಬ್ಬಂದಿ ಇದರಲ್ಲಿ ತೊಡಗಿದ್ದಾರೆ. ಮಾನವ ರಕ್ಷಣಾ ಕಾರ್ಯಗಳಿಗೆ ಇವುಗಳ ಬಳಕೆ ಆಗುತ್ತದೆ. ಈ ಎಲ್ಲಾ 88 ಭಾರತೀಯ ಮಿಲಿಟರಿ ಸಿಬ್ಬಂದಿಯಲ್ಲಿ ಒಬ್ಬರೂ ಕೂಡ ಇರಬಾರದು ಎಂದು ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಬಂದ ದಿನವೇ ಘಂಟಾಘೋಷವಾಗಿ ಆಜ್ಞೆ ಮಾಡಿದ್ದಾರೆ.

ಕಳೆದ ವಾರವಷ್ಟೇ ಒಂದು ಹೆಲಿಕಾಪ್ಟರ್​ಗೆ ನಿಯೋಜಿಸಿದ್ದ ಮಿಲಿಟರಿ ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಜಾಗಕ್ಕೆ ನುರಿತ ನಾಗರಿಕರನ್ನು ಭಾರತ ಕಳುಹಿಸಿದೆ. ಆದರೆ, ನಾಗರಿಕರ ವೇಷ ಹಾಕಿ ಮಿಲಿಟರಿ ಸಿಬ್ಬಂದಿಯನ್ನೇ ಭಾರತ ಕಳುಹಿಸಿದೆ ಎಂಬರ್ಥದಲ್ಲಿ ಅಧ್ಯಕ್ಷರು ಹೇಳಿದ್ದಾರೆ.

ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾ ಜೊತೆ ಹೆಚ್ಚು ಸ್ನೇಹ ಸಂಪಾದನೆ ಮಾಡುತ್ತಿದ್ದಾರೆ. ಮಾಲ್ಡೀವ್ಸ್​ಗೆ ಚೀನಾ ಉಚಿತ ಮಿಲಿಟರಿ ಸಹಾಯ ಮಾಡುವ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಅದರ ಬೆನ್ನಲ್ಲೇ ಮುಯಿಜು ಭಾರತ ವಿರೋಧಿ ಹೇಳಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!