ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಬನವಾಸಿಯಲ್ಲಿ (Banavasi) ಕದಂಬೋತ್ಸವವು (Kadambotsava) ಆರಂಭಗೊಂಡಿದ್ದು, ಕದಂಬೋತ್ಸವಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದ್ದಾರೆ.
ಆದ್ರೆ ಕನ್ನಡದ ಆದಿ ಕವಿ ವರ್ಣಿಸಿದ್ದ ಬನವಾಸಿಯು ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿದೆ ಎಂದು ಸಿಎಂ ಕಚೇರಿ ಸಿಬ್ಬಂದಿಗೇ ತಿಳಿದಿಲ್ಲ.
ಮುಖ್ಯಮಂತ್ರಿ ಕಾರ್ಯಕ್ರಮಗಳ ವಿವರಗಳು ಮತ್ತು ಮುಖ್ಯಮಂತ್ರಿಗಳ ಹೇಳಿಕೆ, ಆದೇಶಗಳನ್ನು ತಿಳಿಸಲು ಬಳಸುವ ಅಧಿಕೃತ ಎಕ್ಸ್ ಖಾತೆಯಲ್ಲಿ (ಟ್ವಿಟರ್), ಬನವಾಸಿ ಕದಂಬೋತ್ಸವದ ನೇರಪ್ರಸಾರದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಮಾಡುವಾಗ ಸಿಬ್ಬಂದಿ ಎಡವಟ್ಟುಮಾಡಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನವಾಸಿ ಎಂದು ತಪ್ಪಾಗಿ ಬರೆದುಕೊಳ್ಳಲಾಗಿದೆ.
“ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.
ಇದಾದ ಕೆಲ ಹೊತ್ತಿನ ಬಳಿಕ ಪ್ರಮಾದದಿಂದ ಎಚ್ಚೆತ್ತ ಸಿಬ್ಬಂದಿ, ತಪ್ಪನ್ನು ಸರಿಪಡಿಸಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ.https://t.co/DPMaumwsje
— CM of Karnataka (@CMofKarnataka) March 5, 2024