ಹೊಸದಿಗಂತ ವರದಿ ಅಂಕೋಲಾ:
ಉಗ್ರ ಸಂಘಟನೆ ಲಷ್ಕರ್ -ಎ-ತೊಯ್ಬಾಗೆ ಸೇರಲು ಬೆಂಗಳೂರಿನ ಜೈಲಿನಲ್ಲಿ ಇರುವ ಖೈದಿಗಳಿಗೆ ಪ್ರಚೋದನೆ ನೀಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ತಾಲೂಕಿಗೆ ಆಗಮಿಸಿದ ಎನ್.ಐ.ಎ ಅಧಿಕಾರಿಗಳು ನಾಸೀರ್ ಖಾನ್ ಎಂಬಾತನ ಕುರಿತಂತೆ ಹುಡುಕಾಟ ನಡೆಸಿ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರ ಸಂಘಟನೆಯನ್ನು ಬಲಪಡಿಸುವ ಕೃತ್ಯಗಳು ದೇಶದಲ್ಲಿ ನಡೆಯುತ್ತಿರುವ ಕುರಿತು ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದು ರಾಜ್ಯದ ಮೂವರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಮಹತ್ವಪೂರ್ಣ ದಾಖಲೆಗಳನ್ನು ಸಂಗ್ರಹಿಸಿದ್ಧು ಬೆಂಗಳೂರು, ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಉಗ್ರ ಸಂಘಟನೆಯೊಂದಿಗೆ ಲಿಂಕ್ ಇರುವ ವ್ಯಕ್ತಿಗಳ ಶೋಧಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಜೈಲಿನಲ್ಲಿ ಇರುವ ಖೈದಿಗಳಿಗಲ್ಲಿ ಉಗ್ರವಾದದ ಮನೋಭಾವನೆ ಬೆಳೆಸಿ ಆತ್ಮಾಹುತಿ ದಾಳಿಯಂತ ಕೃತ್ಯಗಳಿಗೆ ಇಳಿಸುವುದು, ಶಸ್ತ್ರಾಸ್ತ್ರಗಳ ಪೂರೈಕೆ ಮೊದಲಾದ ಪಿತೂರಿ ನಡೆಸಲಾಗುತ್ತಿರುವ ಕುರಿತು ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿ ಪ್ರಕರಣವನ್ನು ಎನ್. ಐ.ಎ ಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದ್ದು ತನಿಖೆಯ ಜಾಡು ಹಿಡಿದು ಅಂಕೋಲಾಕ್ಕೆ ಆಗಮಿಸಿದ ಎನ್. ಐ.ಎ ತಂಡ ಪ್ರಕರಣದಲ್ಲಿ ಶಾಮೀಲಾತಿ ಇರುವ ನಾಸೀರ್ ಖಾನ್ ಕುರಿತು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ರಾಷ್ಟ್ರೀಯ ತನಿಖಾ ದಳ ಅಂಕೋಲಾಕ್ಕೆ ಬಂದು ತನಿಖೆ ನಡೆಸಿರುವ ವಿಷಯ ತಾಲೂಕಿನ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು ಈ ನಾಸೀರ್ ಖಾನ್ ಯಾರು? ಅಂಕೋಲಾ ತಾಲೂಕಿನಲ್ಲಿ ಕುಳಿತು ದೇಶದ್ರೋಹಿ ಕೃತ್ಯಗಳನ್ನು ನಡೆಸಲಾಗುತ್ತಿದೆಯೇ ಎನ್ನುವ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯತೊಡಗಿದೆ.