ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಲ್ಲಿ ತಮಿಳು ನಟ ವಿಜಯ್ ಅಭಿನಯದ ರೀಮೇಕ್ ಸಿನಿಮಾ ‘ಜನನಾಯಗನ್’ ನೋಡೋಕೆ ಜನ ಮುಗಿಬೀಳುತ್ತಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಗುದ್ದಾಡುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಒಂದು ಟಿಕೆಟ್‌ಗೆ ಸಾವಿರ ರೂಪಾಯಿ ಬೆಲೆ ಇದ್ದರೂ ಬಹುತೇಕ ಶೋಗಳು ಈಗಾಗಲೇ ಹೌಸ್‌ಫುಲ್ ಆಗಿವೆ.
‘ಜನನಾಯಗನ್’ ಸಿನಿಮಾ ಮೂಲತಃ ತೆಲುಗು ನಟ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರದ ರೀಮೇಕ್ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆ ಸಿನಿಮಾ ಈಗಾಗಲೇ ಟಿವಿ ಹಾಗೂ ಒಟಿಟಿಯಲ್ಲಿ ಪ್ರಸಾರಗೊಂಡಿದ್ದು, ಕಥೆಯೂ ಬಹುತೇಕ ಪ್ರೇಕ್ಷಕರಿಗೆ ಪರಿಚಿತವಾಗಿದೆ. ಆದರೂ ಅದೇ ಕಥೆಯನ್ನು ಹೊಸ ಮುಖ, ಹೊಸ ಭಾಷೆಯಲ್ಲಿ ನೋಡಲು ಪ್ರೇಕ್ಷಕರು ದೊಡ್ಡ ಮೊತ್ತ ಖರ್ಚು ಮಾಡುತ್ತಿರುವುದು ಅನೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: FOOD | ಕ್ರಿಸ್ಪಿ ಫ್ರೆಂಚ್ ಫ್ರೈಸ್: ಎಲ್ಲರಿಗೂ ಇಷ್ಟವಾಗುವ ಸಿಂಪಲ್ ಸ್ನ್ಯಾಕ್
ಇನ್ನೊಂದು ಕಡೆ, ಕನ್ನಡ ಚಿತ್ರರಂಗದ ದೊಡ್ಡ ನಟರು ಒರಿಜಿನಲ್ ಕಥೆಗಳೊಂದಿಗೆ ಸಿನಿಮಾ ಮಾಡಿದಾಗ, ಅಷ್ಟೊಂದು ಸ್ಪಂದನೆ ಸಿಗುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಟಿಕೆಟ್ ಬೆಲೆ ಕಡಿಮೆ ಇದ್ದರೂ ಕೆಲವರು ಥಿಯೇಟರ್‌ಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಪಕ್ಕದ ಭಾಷೆಯ ರೀಮೇಕ್ ಸಿನಿಮಾಗೆ ಸಾವಿರ ರೂಪಾಯಿ ಕೊಡುವುದಕ್ಕೆ ಯೋಚನೆ ಮಾಡದಿರುವುದು ಯಾವ ನ್ಯಾಯ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರೇಕ್ಷಕರ ಆಯ್ಕೆ ಅವರ ವೈಯಕ್ತಿಕ ಸ್ವಾತಂತ್ರ್ಯವಾದರೂ, ಕನ್ನಡ ಸಿನಿಮಾಗಳಿಗೆ ದೊರಕಬೇಕಾದ ಬೆಂಬಲ ಸಿಗುತ್ತಿಲ್ಲ ಎಂಬ ಬೇಸರ ಸಿನಿಪ್ರೇಮಿಗಳಲ್ಲಿ ವ್ಯಕ್ತವಾಗಿದೆ. ರೀಮೇಕ್ ಕ್ರೇಜ್ ನಡುವೆ, ಒರಿಜಿನಲ್ ಕನ್ನಡ ಸಿನಿಮಾಗಳ ಭವಿಷ್ಯ ಏನು ಎಂಬ ಪ್ರಶ್ನೆ ಮತ್ತೆ ಮುಂದಿಟ್ಟಿದೆ.


