ಹೊಸದಿಗಂತ ವರದಿ,ಮಂಡ್ಯ :
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಿರುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹದೇವಪ್ಪ ಆಗಲಿ, ನಾನಾಗಲೀ ಖಾಲಿ ಸ್ಥಾನ ಇದ್ದಾಗ ಮಾತನಾಡಬೇಕು. ನಮ್ಮದು ಜಾತ್ಯಾತೀತ ಪಕ್ಷ. ಯಾವ ಸಮಾಜಕ್ಕೆ ಬೇಕಾದರೂ ಅವಕಾಶ ಸಿಗಲಿದೆ. ಸಿಎಂ ಆಯ್ಕರೆ ಬಂದಾಗ ಅದರ ಬಗ್ಗೆ ಮಾತನಾಡೋಣ ಎಂದರು.
ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ದಲಿತರಿದ್ದಾರೆ. ಅವರೇ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಮಹದೇವಪ್ಪ ಯಾವ ಸಂದರ್ಭದಲ್ಲಿ ಹಾಗೆ ಹೇಳಿದರೋ ಗೊತ್ತಿಲ್ಲ. ಸಿಎಂ. ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಟಿಕೆಟ್ ಕೊಡುವ ವಿಚಾರ ನನ್ನ ವ್ಯಾಪ್ತಿಯಲ್ಲ
ಚುನಾವಣೆಗೆ ಟಿಕೆಟ್ ಕೊಡುವುದು ನನ್ನ ವ್ಯಾಪ್ತಿಯಲ್ಲಿ ಇಲ್ಲ. ಪಕ್ಷದ ಎಐಸಿಸಿ ಅಧ್ಯಕ್ಷರು, ಪಕ್ಷದ ಹಿರಿಯ ನಾಯಕರು ಕೊಡುತ್ತಾರೆ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಕಾಂಗ್ರೆಸ್‌ನಲ್ಲಿ ದುಡ್ಡು ಇದ್ದವರಿಗೆ ಟಿಕೆಟ್ ಎಂದು ಆರೋಪಿಸಿದ್ದ ಡಾ. ರವೀಂದ್ರಗೆ ತಿರುಗೇಟು ನೀಡಿದರು.
ಡಾ. ರವೀಂದ್ರ ಅವರು ಪಕ್ಷದ ಪ್ರಧಾನ ಕಾರ‌್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಅಂಗೀಕರಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ. ರವೀಂದ್ರ ಅವರ ತಮ್ಮನ ವರ್ಗಾವಣೆಯನ್ನು ಕೇಳಿದ್ದರು. ಅವರನ್ನು ವರ್ಗಾವಣೆ ಮಾಡಿಸಿ ಅದನ್ನು ವಾಟ್ಸಾಪ್ ಕೂಡ ಮಾಡಿದ್ದೇನೆ. ರವೀಂದ್ರ ನನಗೆ ಒಬ್ಬ ಒಳ್ಳೆಯ ಸ್ನೇಹಿತ. ಅವರು ಪಕ್ಷದಲ್ಲಿ ಮುಂದುವರಿಯುವುದು ಬಿಡುವುದು ಅವರಿಗೇ ಬಿಟ್ಟ ವಿಚಾರ ಎಂದು ತಿಳಿಸಿದರು.
ಮೇಡಮ್ ಒಳ್ಳೆಯ ಕಲಾವಿದರು. ಅವರಷ್ಟು ನಮಗೆ ಅನುಭವ ಇಲ್ಲ. ಅಂಬರೀಶ್ ಜೊತೆಗೆ ಕಲೆ ಮಾಡಿದ್ದಾರೆ. ಈಗ ಎಂಪಿ ಆಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಕಾಂಗ್ರೆಸ್ ದುಡ್ಡಿದ್ದವರಿಗೆ ಟಿಕೆಟ್ ಎಂಬ ವಿಚಾರವನ್ನು ಸಮರ್ಥಿಸಿಕೊಂಡಿದ್ದ ಸುಮಲತಾ ಅವರಿಗೆ ತಿರುಗೇಟು ನೀಡಿದರು.