ಕಾಡು ಹಂದಿ ದಾಳಿಯಿಂದ ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ಪರಿಹಾರ: ಸಚಿವ ಈಶ್ವರ್ ಖಂಡ್ರೆ

ಹೊಸದಿಗಂತ ವರದಿ,ಬೀದರ್ :

ಬೀದರ್ ದಕ್ಷಿಣ ಕ್ಷೇತ್ರ ಹೊಕ್ರಣ ಗ್ರಾಮದ ಮಹಿಳೆ ಕವಿತಾ ಅವರು ಗುರುವಾರ ಜೋಳದ ಕಟಾವಿಗೆ ಹೋದಾಗ ಹೊಲದಲ್ಲಿ ಕಾಡುಹಂದಿ ದಾಳಿಯಿಂದ ಮೃತ ಪಟ್ಟಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಕುಟುಂಬಕ್ಕೆ 24 ತಾಸಿನಲ್ಲಿ ಸರ್ಕಾರದ ನಿಯಮದ ಪ್ರಕಾರ 15 ಲಕ್ಷ ರೂ ಪರಿಹಾರವನ್ನು ನೀಡಲಾಗಿದೆ ಎಂದು ಅರಣ್ಯ ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ‌ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದರು.

ಶುಕ್ರವಾರ ಹೊಕ್ರಾಣ ಕೆ ಗ್ರಾಮದ ಮೃತ ಕುಟುಂಬದ ಮಹಿಳೆಯ ಮನೆಗೆ ಭೇಟಿ ನೀಡಿ ಅವರ‌ ಕುಟುಂಬದವರಿಗೆ ಸಾಂತ್ವನ ಹೇಳಿ 15 ಲಕ್ಷದ ಚೆಕ್ ವಿತರಿಸಿದರು.

ಇಂಥ ಘಟನೆಗಳನ್ನು ಮರು ಕಳಿಸದಂತೆ ನೋಡಿಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ‌‌ ಕೊಟ್ಟಿದ್ದೆನೆ. ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಈ ಘಟನೆ ಆದ ತಕ್ಷಣ ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಸೂಚನೆ ನೀಡಿದ್ದೆ ಅವರು ಆಸ್ಪತ್ರೆ ಭೇಟಿ ನೀಡಿದ್ದರು. ಮೃತ ಕುಟುಂಬದ ಸದಸ್ಯರಿಗೆ 24 ತಾಸಿನಲ್ಲಿ ಪರಿಹಾರ ನೀಡುವ ಕೆಲಸ‌‌ ಮಾಡಲಾಗಿದೆ ಎಂದರು.

ಈ ಕುಟುಂಬಕ್ಕೆ ಪರಿಹಾರದ ಹೊರತಾಗಿ 5 ವರ್ಷಗಳ ವರೆಗೆ 4 ಸಾವಿರ ರೂ. ಪೆನ್ಸನ್‌ ನೀಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕಾಗಿ ಕ್ರಮ ವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೆನೆ ಮತ್ತು ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕಲಬುರಗಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವರ್, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಕುಮಾರ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಂದ್ರ ಮೌರ್ಯ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಹೊಕ್ರಾಣ ಕೆ. ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!