ಹೊಸದಿಗಂತ ವರದಿ ಮಡಿಕೇರಿ:
ಆಟೋ ರಿಕ್ಷಾ ಮಗುಚಿ ಎಂಟು ತಿಂಗಳು ಪ್ರಾಯದಮಗು ಸಾವಿಗೀಡಾದ ಘಟನೆ ದಕ್ಷಿಣ ಕೊಡಗಿನ ಬೀರುಗ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಜಾರ್ಖಂಡ್ ಮೂಲದ ಅನುರಾಗ್ ರಾಜ್ (8ತಿಂಗಳು) ಮೃತಪಟ್ಟ ಮಗುವಾಗಿದೆ. ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕರು ದಕ್ಷಿಣ ಕೊಡಗಿನ ಶ್ರೀಮಂಗಲದಿಂದ ಬೀರುಗ ಗ್ರಾಮಕ್ಕೆ ಆಟೋದಲ್ಲಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ಬೀರುಗ ಸಮೀಪ ಜಿಂಕೆಯೊಂದು ರಸ್ತೆಗೆ ಅಡ್ಡ ಬಂದಾಗ ಚಾಲಕ ದಿಢೀರಾಗಿ ಬ್ರೇಕ್ ಹಾಕಿದ್ದು, ಈ ಸಂದರ್ಭ ಆಟೋ ಮಗುಚಿಕೊಂಡಿದೆ. ಆ ವೇಳೆಗೆ ತಾಯಿಯ ಕೈಯ್ಯಲ್ಲಿದ್ದ ಮಗು ರಿಕ್ಷಾದಡಿಗೆ ಬಿದ್ದು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗುವಿನ ಮೃತದೇಹವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.